ಬೆಂಗಳೂರು, ಡಿ.30: ರಾಜ್ಯದೆಲ್ಲೆಡೆ ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ವೆಂಕಟೇಶ್ವರ ದೇವಾಲಯಗಳಿಗೆ ಭಕ್ತರ ಮಹಾಪೂರ ಹರಿದುಬಂದಿತು. ಮಧ್ಯರಾತ್ರಿಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭಗೊಂಡು, ಭಕ್ತರು ಉಪವಾಸ ವ್ರತದೊಂದಿಗೆ ದೇವರ ದರ್ಶನ ಪಡೆದು ಪುನೀತರಾದರು. ವಿವಿಧ ಬಗೆಯ ಹೂವುಗಳು ಮತ್ತು ಆಭರಣಗಳಿಂದ ಅಲಂಕೃತಗೊಂಡಿದ್ದ ವೆಂಕಟೇಶ್ವರನ ದರ್ಶನ ಭಕ್ತರನ್ನು ಆಕರ್ಷಿಸಿತು.
ಬೆಂಗಳೂರಿನ ವೈಯಾಲಿಕಾವಲ್‌ನ ಟಿಟಿಡಿ ವೆಂಕಟೇಶ್ವರ ದೇವಾಲಯದಲ್ಲಿ ಮಧ್ಯರಾತ್ರಿ 1.30ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇಂದು ರಾತ್ರಿ 12 ಗಂಟೆಯವರೆಗೂ ದರ್ಶನ ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿಸ್ತಿನಿಂದ ದೇವರ ದರ್ಶನ ಪಡೆದರು.
ರಾಜಾಜಿನಗರ ಭಾಗದಲ್ಲಿ ವೆಂಕಟೇಶ್ವರ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, 5ನೇ ಬ್ಲಾಕ್‌ನಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಏಕಾದಶಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇದೇ ರೀತಿ ಇಸ್ಕಾನ್ ಮಂದಿರದಲ್ಲಿಯೂ ವೆಂಕಟೇಶ್ವರನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಜನೆ, ಸಂಕೀರ್ತನೆ, ಮಹಾಭಿಷೇಕ, ವೈಕುಂಠ ದ್ವಾರ ಪೂಜೆ, ಕಲ್ಯಾಣೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಕಾಮಾಕ್ಷಿಪಾಳ್ಯದ ವೃಷಭಾವತಿನಗರದಲ್ಲಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ದೇವರ ಅಲಂಕಾರ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗಿದ್ದು, ಭಕ್ತರ ಮನಸೂರೆಗೊಂಡಿತು. ಮಧ್ಯರಾತ್ರಿಯಿಂದಲೇ ವಿಶೇಷ ಪೂಜೆಗಳು ನಡೆದವು. ಮಹಾಲಕ್ಷ್ಮಿ ಲೇಔಟ್‌ನ ಶ್ರೀನಿವಾಸ ದೇವಾಲಯಕ್ಕೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಚಾಮರಾಜಪೇಟೆಯ ಕೋಟೆ ವೆಂಕಟರಮಣ ದೇವಾಲಯ, ಉಲ್ಲಾಳಿನ ಮುನೇಶ್ವರ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಮಾಗಡಿ ರಸ್ತೆಯ ಎಂ.ಜಿ. ರೈಲ್ವೆ ಕಾಲೋನಿಯ ಶ್ರೀ ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ನಗರಾದ್ಯಂತ ಇರುವ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ನೆಲಮಂಗಲದ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀದೇವಿ–ಭೂದೇವಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಉತ್ತರ ಬಾಗಿಲ ಮೂಲಕ ವೈಕುಂಠ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲಿಯೂ ಏಕಾದಶಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದ್ದು, ಈ ದಿನ ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತರು ವೈಕುಂಠ ದ್ವಾರಗಳ ಮೂಲಕ ದೇವರ ದರ್ಶನ ಪಡೆದು ಇಷ್ಟಾರ್ಥಗಳ ಪೂರೈಕೆಗೆ ಪೂಜೆ ಸಲ್ಲಿಸಿದರು.

