ಶ್ರೀನಗರ: ವಿಶ್ವದ ಅತಿ ಎತ್ತರದ ಸೇತುವೆಯಾದ ಚೆನಾಬ್ ಸೇತುವೆಯ ಮೇಲೆ ಶನಿವಾರ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನಿಲ್ದಾಣದಿಂದ ಶ್ರೀನಗರದವರೆಗೆ ವಂದೇಭಾರತ್ ರೈಲಿನ ಪ್ರಪ್ರಥಮ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ತನ್ನ ಐಷರಾಮಿ ವೇಗದಿಂದ ಹೆಸರು ವಾಸಿಯಾಗಿರುವ ವಂದೇ ಭಾರತ್ ರೈಲು ಕತ್ರಾ ರೈಲು ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು 11ಗಂಟೆ ಹೊತ್ತಿಗೆ ಶ್ರೀನಗರ ರೈಲು ನಿಲ್ದಾಣಕ್ಕೆ ಬಂದು ತಲುಪಿತು. 150 ಕಿ,ಮೀ ಉದ್ದದ ಮಾರ್ಗವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿತು.
ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಯಾಣವೂ ಇಲ್ಲಿನ ಅರಣ್ಯದ ಮಾರ್ಗ, ತಿರುವುಗಳಿಂದಾಗಿ ಸುಮಾರು 6 ರಿಂದ 8 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ, ಇದೀಗ ಈ ಪ್ರಯಾಣ ಕಡಿಮೆ ಸಮಯದಲ್ಲಿ ಮುಗಿಯಲಿದೆ. ಇನ್ನು ಈ ರೈಲು ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆ ದಾಟಿದ್ದು ವಿಶೇಷವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಮೇಲೆ ಅತಿ ಎತ್ತರದ ಸೇತುವೆಯನ್ನು ನಿರ್ಮಿಸಲು ರೈಲ್ವೆ ಇಲಾಖೆಗೆ 20 ವರ್ಷಗಳಿಗಿಂತ ಹೆಚ್ಚು ಸಮಯ ಹಿಡಿಯಿತು. ಇದು ಕಮಾನಿನ ಸೇತುವೆಯಾಗಿದ್ದು, ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ.
ಭಾರತದ ಮೊದಲ ಕೇಬಲ್ ಶೈಲಿಯ ರೈಲ್ವೆ ಸೇತುವೆಯಾದ ಅಂಜಿ ಖಡ್ ಸೇತುವೆಯನ್ನು ಕೂಡ ದಾಟಿ ಈ ರೈಲು ಪ್ರಯಾಣ ಬೆಳೆಸಿ ಗಮನ ಸೆಳೆಯಿತು. ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಈ ರೈಲಿನ ವಿನ್ಯಾಸಗೊಳಿಸಿದ್ದು, ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿನ ತಾಪಮಾನವನ್ನು ಗಮನದಲ್ಲಿರಿಸಿಕೊಂಡು ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ರೈಲು ಕನಿಷ್ಠ ತಾಪಮಾನ ಅಂದರೆ -30 ಡಿಗ್ರಿ ಸೆಲ್ಸಿಯಸ್ನಲ್ಲೂ ಕೂಡ ಕಾರ್ಯಾಚರಣೆ ನಡೆಸಲಿದ್ದು, ರೈಲಿನೊಳಗಿರುವ ಆಸನಗಳು ಸುಧಾರಿತ ಶಾಖದ ವ್ಯವಸ್ಥೆ ಹೊಂದಿದ್ದು, ಇದು ರೈಲಿನಲ್ಲಿರುವ ಜೈವಿಕ ಶೌಚಾಲಯ ಟ್ಯಾಂಕ್ ನೀರು ಹೆಪ್ಪುಗಟ್ಟುವುದನ್ನು ತಡೆಯುತ್ತದೆ.