ಕೋಲ್ಕತ್ತಾ: 1972ರ ಮ್ಯೂನಿಚ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡದ ಸದಸ್ಯ ಡಾ.ವೆಸ್ ಪೇಸ್ ಇಂದು (ಆ.14) ಬೆಳಗ್ಗೆ ನಿಧನರಾಗಿದ್ದಾರೆ.
ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರ ತಂದೆಯಾದ ಡಾ. ವೆಸ್ ಪೇಸ್ ತಮ್ಮ 80 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೇಸ್ ಅವರನ್ನು ಮಂಗಳವಾರ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಡಾ. ವೆಸ್ ಪೇಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿಯಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಅವರು ಭಾರತೀಯ ಹಾಕಿ ತಂಡದಲ್ಲಿ ಮಿಡ್‌ಫೀಲ್ಡರ್ ಆಗಿದ್ದರು. ಏಪ್ರಿಲ್ 1945 ರಲ್ಲಿ ಗೋವಾದಲ್ಲಿ ಜನಿಸಿದ ಡಾ. ಪೇಸ್, 1972 ರ ಮ್ಯೂನಿಚ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಪ್ರಮುಖ ಸದಸ್ಯರಾಗಿದ್ದರು.
ತಮ್ಮ ಚುರುಕುತನ, ಆಟದ ಪ್ರಜ್ಞೆ ಮತ್ತು ದಣಿವರಿಯದ ಕೆಲಸದ ನೀತಿಗೆ ಹೆಸರುವಾಸಿಯಾಗಿದ್ದರು. ಡಾ.ವೆಸ್ ಪೇಸ್ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಭಾರತೀಯ ಡೇವಿಸ್ ಕಪ್ ತಂಡಗಳಲ್ಲಿ ಹಲವಾರು ಕ್ರೀಡಾ ಸಂಸ್ಥೆಗಳೊಂದಿಗೆ ವೈದ್ಯಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು.
ಡಾ. ವೆಸ್ ಪೇಸ್ ಅಂತಾರಾಷ್ಟ್ರೀಯ ಮಟ್ಟದ ಹಾಕಿಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇದಷ್ಟೇ ಅಲ್ಲದೇ ವಿವಿಧ ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮಟ್ಟದಲ್ಲಿ ಆಡಿ ತಾವೊಬ್ಬ ಆಲ್ರೌಂಡ್ ಅಥ್ಲೀಟ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.

