ಹೈದರಾಬಾದ್: ಕನ್ನಡ, ತೆಲುಗು, ತಮಿಳು ಸೇರಿ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇಂದು ಬೆಳಗ್ಗೆ 4 ಗಂಟೆಗೆ ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಅವರಿಗೆ 83ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರು, ಮಗನ ನಿಧನದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನಲ್ಲಿವ ಅವರ ನಿವಾಸದಲ್ಲಿ ಮುಂಜಾನೆ ವಿಧಿವಶರಾಗಿದ್ದಾರೆ.
ಕೋಟ ರಾವ್ ಅವರು ಖಳನಾಯಕ, ಹಾಸ್ಯನಟ ಹಾಗೂ ಪೋಷಕ ಪಾತ್ರಗಳಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.ಮೋಹನ್ ಬಾಬು ಅವರೊಂದಿಗೆ ಸುಮಾರು 60 ಚಿತ್ರಗಳಲ್ಲಿ ಅವರು ಸೇರಿ ಅಭಿನಯಿಸಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
80 ವರ್ಷ ದಾಟಿದ ಮೇಲೆ ವೃದ್ಧಾಪ್ಯಸಮಸ್ಯೆ ಶುರುವಾಗಿದ್ದು ಸಿನಿಮಾ ನಟನೆ ಕಡಿಮೆಯಾಗಿತ್ತು ಅವರ ಕೊನೆಯ ಚಿತ್ರ 2023ರಲ್ಲಿ ಬಿಡುಗಡೆಯಾದ ಸುವರ್ಣ ಸುಂದರಿ ಸಾಕಷ್ಟು ಮೆಚ್ಚುಗೆ ಪಡೆದಿತ್ತು.ಶ್ರೀನಿವಾಸ ರಾವ್ ಅವರು 1942ರ ಜುಲೈ 10ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. ಅವರ ತಂದೆ ಡಾ. ಸೀತಾರಾಮಾಂಜನೇಯುಲು. ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಕಾಣಿಸಿಕೊಂಡ ನಂತರ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು.
1978ರಲ್ಲಿ ಪ್ರಣಾಮ್ ಖರೀದು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.ತೆಲುಗು ಮಾತ್ರವಲ್ಲದೇ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಕೋಟ ಶ್ರೀನಿವಾಸ ರಾವ್ ಅವರು ನಟಿಸಿದ್ದರು.ಕಳನಾಯಕನ ಪಾತ್ರ, ಹಾಸ್ಯ ಸೇರಿದಂತೆ ಹಲವು ಬಗೆಯಲ್ಲಿ ಅವರು ಜನರನ್ನು ರಂಜಿಸಿದ್ದರು.
ರಾಜಕೀಯದಲ್ಲೂ ಮಿಂಚಿದ್ದ ಕೋಟ ಶ್ರೀನಿವಾಸ್ ರಾವ್
ಕೋಟ ಶ್ರೀನಿವಾಸ್ ರಾವ್ ಅವರು ಕೇವಲ ನಟರಲ್ಲ. ರಾಜಕೀಯಕ್ಕೂ ಪ್ರವೇಶಿಸಿ ಯಶಸ್ಸುಕಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಕನ್ನಡಲ್ಲೂ ನಟನೆ :
ಕನ್ನಡದ ಲೇಡಿ ಕಮಿಷನರ್, ರಕ್ತ ಕಣ್ಣೀರು, ಲವ್, ನಮ ಬಸವ, ನಮಣ್ಣ, ಶ್ರೀಮತಿ, ಕಬ್ಜಾ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.ಈವರೆಗೆ ಸುಮಾರು 750 ಕ್ಕೂ ಹೆಚ್ಚಿ ಸಿನಿಮಾದಲ್ಲಿ ನಟಿಸಿದ ಹಿರಿಮೆ ಹೊಂದಿದ್ದರು.

