Vice President Election : ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದೆ. ಅಧಿಸೂಚನೆಯ ಪ್ರಕಾರ, ಆಗಸ್ಟ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 22 ರಂದು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಚುನಾವಣಾ ಕದನದಿಂದ ಹಿಂದೆ ಸರಿಯಲು ಆಗಸ್ಟ್ 25 ಕೊನೆಯ ದಿನಾಂಕವಾಗಿದೆ.
ಭಾರತದ ಉಪರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರು ಸೇರಿ ಆಯ್ಕೆ ಮಾಡುತ್ತಾರೆ. ನಾಮನಿರ್ದೇಶಿತ ಸದಸ್ಯರೂ ಸಹ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದ ಮತದಾನ ನಡೆಯುವ ದಿನದವರೆಗೆ 30 ದಿನಗಳ ಕಾಲಾವಕಾಶ ಇರುತ್ತದೆ.
ಜುಲೈ 21 ರಂದು ಜಗದೀಪ್ ಧನಕರ್ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ನೀಡಿದರು. 2022 ರಿಂದ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ 74 ವರ್ಷದ ಧನಖರ್, ರಾಜ್ಯಸಭಾ ಅಧ್ಯಕ್ಷರಾಗಿ ಮುಂಗಾರು ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ಬೆನ್ನಲ್ಲೇ ರಾಜೀನಾಮೆ ಘೋಷಣೆ ಮಾಡಿದರು.
ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ನಾನು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಧನಕರ್ ಅವರು ರಾಷ್ಟ್ರಪತಿ ಬ್ರೌವದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಉಪರಾಷ್ಟ್ರಪತಿಗಳ ಕಚೇರಿ ಬಿಡುಗಡೆ ಮಾಡಿತು.
ಭಾರತೀಯ ಸಂವಿಧಾನದ 66ನೇ ವಿಧಿಯ ಪ್ರಕಾರ, ಉಪರಾಷ್ಟ್ರಪತಿಯನ್ನ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿರುವ ಸಂಸತ್ತಿನ ಎರಡೂ ಸದನಗಳು ಆಯ್ಕೆ ಮಾಡುತ್ತದೆ. ಸದಸ್ಯರು ಏಕ ವರ್ಗಾವಣೆ ಮತ ವ್ಯವಸ್ಥೆಯನ್ನು ಬಳಸಿಕೊಂಡು ರಹಸ್ಯ ಮತದಾನದ ಮೂಲಕ ಮತ ಚಲಾಯಿಸುತ್ತಾರೆ. 17ನೇ ಉಪರಾಷ್ಟ್ರಪತಿ ಚುನಾವಣೆಯು 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ನಡೆಯಲಿದೆ.

