ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಶಾನನ್ ಗೇಬ್ರಿಯಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2023 ರಲ್ಲಿ ಭಾರತದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವಾಡಿದ್ದ ಶಾನನ್ ಗೇಬ್ರಿಯಲ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಕಳೆದ 12 ವರ್ಷಗಳ ಕಾಲ ವೆಸ್ಟ್ ಇಂಡೀಸ್ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ವಿಂಡೀಸ್ ಪರ ಅತ್ಯುನ್ನತ ಮಟ್ಟದಲ್ಲಿ ಆಡಿರುವುದು ನನಗೆ ಅಪಾರ ಸಂತೋಷವನ್ನು ತಂದಿದೆ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು. ಅದರಂತೆ ಇದೀಗ ನಾನು ಸಹ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಶಾನನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
2012 ರಲ್ಲಿ ವೆಸ್ಟ್ ಇಂಡೀಸ್ ಪರ ಪಾದಾರ್ಪಣೆ ಮಾಡಿದ್ದ ಶಾನನ್ ಗೇಬ್ರಿಯಲ್ ಒಟ್ಟು 86 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 59 ಟೆಸ್ಟ್ ಪಂದ್ಯಗಳ 104 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 166 ವಿಕೆಟ್ ಕಬಳಿಸಿ ಮಿಂಚಿದ್ದರು.
ಹಾಗೆಯೇ 25 ಏಕದಿನ ಪಂದ್ಯಗಳಲ್ಲಿ 1148 ಎಸೆತಗಳನ್ನು ಎಸೆದಿರುವ ಶಾನನ್ 33 ವಿಕೆಟ್ ಕಬಳಿಸಿದ್ದಾರೆ. ಇನ್ನು ಕೇವಲ 2 ಟಿ20 ಪಂದ್ಯಗಳಲ್ಲಿ ವಿಂಡೀಸ್ ಪರ ಕಾನಿಸಿಕೊಂಡಿದ್ದ ಗೇಬ್ರಿಯಲ್ 3 ವಿಕೆಟ್ ಪಡೆದಿದ್ದರು.