ದೆಹಲಿ: ಆಮ್ ಆದ್ಮಿ ಪಕ್ಷದ ನಾಯಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ.
ಸದ್ಯ ಸಿಎಂ ರೇಸ್‌ನಲ್ಲಿ ಸಚಿವೆ ಅತಿಶಿ , ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್ ಛಡ್ಡಾ, ಕೈಲಾಶ್ ಗೆಹ್ಲೋಟ್ ಹಾಗೂ ಸಂಜಯ್ ಸಿಂಗ್ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.
ಮತ್ತೊಂದೆಡೆ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಸಭೆ ನಡೆಸಿರುವುದು ತೀವ್ರ ಕುತೂಹಲ ಉಂಟುಮಾಡಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಇಂದು ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆಯೂ ಚರ್ಚೆಯಾಗಿದೆ ಪಕ್ಷದ ವರಿಷ್ಠರ ನಿರ್ಧಾರದ ನಂತರ ಇದು ಮೊದಲ ಸಭೆಯಾಗಿದೆ. ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಜ್ರಿವಾಲ್ ಹಠಾತ್ ಘೋಷಣೆಯಿಂದಾಗಿ ಅವರ ಪತ್ನಿ ಸುನೀತಾ, ಸಚಿವರಾದ ಅತಿಶಿ ಮತ್ತು ಗೋಪಾಲ್ ರೈ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬಂತಹ ಮಾತುಗಳು ಕೂಡಾ ಕೇಳಿಬರುತ್ತಿದೆ.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಸೆಪ್ಟೆಂಬರ್ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ.ತಮ್ಮ ಪಕ್ಷದ ಸಹೋದ್ಯೋಗಿಯೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

