ಕಾರ್ಕಳ : ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಇ-ಕೆವೈಸಿ ಅಪ್‌ಡೇಟ್ ಮಾಡುವುದಾಗಿ ಮಹಿಳೆಯೋರ್ವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ನಿವೃತ್ತ ನರ್ಸ್ ಸಾಣೂರು ಗ್ರಾಮದ ಪ್ರೇಮಲತಾ ಅವರು ಜೂ. 26ರಂದು ಟ್ರೈನ್‌ನಲ್ಲಿ ಮುಂಬಯಿಗೆ ಹೋಗುತ್ತಿರುವಾಗ ಸಂಜೆ 4:30 ಗಂಟೆಗೆ 7076260938 ನಂಬರ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕಾರ್ಕಳ ಸಾಣೂರು ಬ್ರಾಂಚ್ ಯೂನಿಯನ್ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಲು ಇದೆ, ನಿಮ್ಮ ಅಕೌಂಟ್ ನಂಬ್ರ ಹೇಳಿ ಎಂದು ಕೇಳಿದ್ದಾನೆ.
ಈ ವೇಳೆ ಪ್ರೇಮಲತಾ ಅವರು ಅಕೌಂಟ್ ನಂಬರ್ ನೆನಪಿಲ್ಲ ಎಂದು ಹೇಳಿದಾಗ ಡೆಬಿಟ್ ಕಾರ್ಡ್ ನಂಬರ್ ಹೇಳುವಂತೆ ತಿಳಿಸಿದ್ದಾನೆ. ಪ್ರೇಮಲತಾ ಅವರು ಆ ವ್ಯಕ್ತಿ ಬ್ಯಾಂಕ್‌ನಿಂದ ಮಾತನಾಡುವುದೆಂದು ನಂಬಿ ತನ್ನ ಡೆಬಿಟ್ ಕಾರ್ಡ್ ನಂಬರ್ ಹೇಳಿರುತ್ತಾರೆ.
ಜೂ. 26ರಂದು ಪ್ರೇಮಲತಾ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,19,000 ರೂ. ಹಣ ಕಡಿತಗೊಂಡಿರುತ್ತದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

