ಬೆಂಗಳೂರು, ಫೆಬ್ರವರಿ 26: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಪ್ರದೇಶದ ಹೊಲದ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಕುತ್ತಿಗೆ ನಿಗ್ರಹಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಸೋನಾಲಿ ಖತುನ್ (30) ಎಂದು ಗುರುತಿಸಲಾಗಿದೆ. ಅವರು ಮೂಲತಃ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿ. ಪತಿ ಬಾಬು ಶೇಖ್ (33) ಅವರೊಂದಿಗೆ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಸಿದ್ದಾಪುರದ ರಾಯಲ್ ಇಂಗ್ಲಿಷ್ ಶಾಲೆ ಸಮೀಪ ವಾಸಿಸುತ್ತಿದ್ದರು. ದಂಪತಿಗೆ 14 ವರ್ಷದ ಪುತ್ರ ಮತ್ತು 8 ವರ್ಷದ ಪುತ್ರಿ ಇದ್ದಾರೆ. ಜೊತೆಗೆ ಮೃತೆಯ ತಾಯಿ ಸಾಯ್ರಾ (60) ಕೂಡ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಸೋನಾಲಿ ಖತುನ್ ಬ್ರುಕ್‌ಫೀಲ್ಡ್‌ನ ವಾಲ್ಸನ್ಸ್ ಫೆಸಿಲಿಟಿ ಸೊಲ್ಯೂಷನ್ಸ್ ಸಂಸ್ಥೆಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಪತಿ ಬಾಬು ಶೇಖ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ಫೆಬ್ರವರಿ 25 ರಂದು ಸಂಜೆ ಸುಮಾರು 7.30 ಗಂಟೆಗೆ ಸೋನಾಲಿ ಮನೆಗೆ ಬಂದು, ಕೆಲಸದ ಸ್ಥಳದಲ್ಲಿ ಮೊಬೈಲ್ ಫೋನ್ ಬಿಟ್ಟು ಬಂದಿರುವುದಾಗಿ ತಿಳಿಸಿ ಅದನ್ನು ತಂದುಕೊಳ್ಳಲು ಮತ್ತೆ ಹೊರಡುತ್ತಿರುವುದಾಗಿ ಪತಿಗೆ ಹೇಳಿದ್ದಾರೆ. ಈ ವೇಳೆ ಪತಿಯ ಮೊಬೈಲ್ ಫೋನ್ ತೆಗೆದುಕೊಂಡು ಮನೆ ಬಿಡಿದ್ದರು. ನಂತರ ಅವರು ಮನೆಗೆ ವಾಪಸ್ಸಾಗಿಲ್ಲ.
ಕುಟುಂಬದವರು ಸಂಪರ್ಕಿಸಲು ಪ್ರಯತ್ನಿಸಿದಾಗ ಪತಿಯ ಮೊಬೈಲ್ ಒಂದು ಬಾರಿ ಮಾತ್ರ ರಿಂಗ್ ಆಗಿದ್ದು, ನಂತರ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು.
ಇಂದು ಬೆಳಿಗ್ಗೆ ಸಿದ್ದಾಪುರದ ಹೊಲದ ಬಳಿ ಶವ ಪತ್ತೆಯಾದ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕುತ್ತಿಗೆ ನಿಗ್ರಹಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

