ಬೆಂಗಳೂರು: ಬೈಕ್ಗೆ ಕಾರು ಡಿಕ್ಕಿಯಾಗಿ ಯುವತಿ ಮೃತಪಟ್ಟಿರೋ ಘಟನೆ ಬಾಗಲೂರು ರಸ್ತೆಯ ಕೆಐಎಡಿಬಿ ಜಂಕ್ಷನ್ನಲ್ಲಿ ನಡೆದಿದೆ. ನಂದಿನಿ (24) ಮೃತ ಯುವತಿ. ಮೃತ ನಂದಿನಿ ಏರೋನಾಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ನೆಲಮಂಗಲದ ಹುಸ್ಕೂರು ಗ್ರಾಮದ ಯುವತಿ ನಗರದ ಬಾಗಲೂರಿನಲ್ಲಿ ವಾಸವಿದ್ದಳು. ನಿನ್ನೆ ಸಂಜೆ ಕೆಲಸ ಮುಗಿಸಿ ಪಿಜಿಗೆ ಹಿಂದಿರುಗುವಾಗ ಫಾರ್ಚೂನರ್ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.
ಗುರುವಾರ ಸಂಜೆ 6:30ಕ್ಕೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಪಿಜಿಗೆ ಹಿಂದಿರುಗುವಾಗ ಫಾರ್ಚೂನರ್ ಕಾರು ಗುದ್ದಿದೆ. ಅಪಘಾತದ ರಭಸಕ್ಕೆ ನಂದಿನಿ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತೀವ್ರ ರಕ್ತಸ್ರಾವವಾಗಿ ನಂದಿನಿ ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಫಾರ್ಚುನರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

