ಬೆಂಗಳೂರು, ಫೆ.18: ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದ ಯುವಕನು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಬೈಕ್ ಮತ್ತು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪವನ್ (24) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪವನ್ ಬೆಂಗಳೂರು ಉತ್ತರ ತೋಟದ ಗುಡ್ಡದಹಳ್ಳಿ ನಿವಾಸಿಯಾಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಐವರಕಂಡಪುರದ ಬಳಿ ನಿನ್ನೆ ಸಂಜೆ ಸುಮಾರು 5.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತಕ್ಕೆ ಓವರ್‌ಸ್ಪೀಡ್‌ನಲ್ಲಿ ಚಲಿಸುತ್ತಿದ್ದ ಗೂಡ್ಸ್ ವಾಹನ ಹಾಗೂ ಬೈಕ್ ಸವಾರರ ಅಜಾಗರೂಕತೆ ಕಾರಣ ಎನ್ನಲಾಗುತ್ತಿದೆ. ಡಿಕ್ಕಿಯ ತೀವ್ರತೆಗೆ ಪವನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

