ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಆತಂಕಕಾರಿ ವಿಡಿಯೋಗಳು ವೈರಲ್ ಆಗುತ್ತಿದ್ದು, ಯುವಕರು ನಿಂತಿದ್ದ ಸ್ಥಳದಲ್ಲೇ ಅಚೇತನವಾಗಿ ನಿಂತಿರುವ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆದಿವೆ. ಈ ರೀತಿಯ ಸ್ಥಿತಿಗೆ ಹೊಸದಾಗಿ ಹರಿದಾಡುತ್ತಿರುವ ‘ಜಾಂಬಿ ಡ್ರಗ್’ ಕಾರಣ ಎನ್ನಲಾಗುತ್ತಿದ್ದು, ಇದು ಯುವಜನತೆಯಲ್ಲಿ ಭೀತಿಯನ್ನು ಹುಟ್ಟಿಸಿದೆ.
ಈ ‘ಜಾಂಬಿ ಡ್ರಗ್’ ಸೇವಿಸಿದರೆ, ವ್ಯಕ್ತಿ ಚಲನವಲನ ಕಳೆದುಕೊಂಡು, ಸಿನಿಮಾಗಳಲ್ಲಿ ಕಾಣಿಸುವ ಜಾಂಬಿಗಳಂತೆಯೇ ವರ್ತಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾದಕ ವಸ್ತು ಬೆಂಗಳೂರು ನಗರದಲ್ಲಿಗೂ ತಲುಪಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಕುರಿತು ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ನಾವು ‘ಭೀಮ’ ಸಿನಿಮಾದಲ್ಲಿ ಗಾಂಜಾ ಸೇರಿದಂತೆ ವಿವಿಧ ಡ್ರಗ್‌ಗಳ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇವೆ. ಇದೀಗ ‘ಜಾಂಬಿ ಡ್ರಗ್’ ಎಂಬ ಹೊಸ ಮಾದಕ ವಸ್ತು ಬಗ್ಗೆ ಕೇಳಿಬರುತ್ತಿದೆ. ಇದರ ಬಗ್ಗೆ ಯುವಕರು ಹಾಗೂ ಪೋಷಕರು ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿದ್ದಾರೆ.
ಇದಲ್ಲದೆ, “ಈ ಜಾಂಬಿ ಡ್ರಗ್ ನಿಜವಾಗಿದೆಯೇ ಅಥವಾ ಸುಳ್ಳು ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು. ಈಗಾಗಲೇ ಮಾದಕ ವಸ್ತು ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ರೀತಿಯ ಡ್ರಗ್‌ಗಳ ಬಗ್ಗೆ ಕೂಡ ತನಿಖೆ ಮಾಡಿ ಯುವಕರನ್ನು ರಕ್ಷಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ಹಾಗೇ, “ನಿಮ್ಮ ಸುತ್ತಮುತ್ತ ಈ ರೀತಿಯ ಡ್ರಗ್ ಬಳಕೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಯುವಕರಿಗೆ ಕರೆ ನೀಡಿದ್ದಾರೆ.
ಸೂಚನೆ: ದುನಿಯಾ ವಿಜಯ್ ಅವರು ತಮ್ಮ ಸಿನಿಮಾಗಳ ಮೂಲಕ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅವರ ನಿರ್ದೇಶನದ ‘ಭೀಮ’ ಸಿನಿಮಾ ಬೆಂಗಳೂರಿನ ಡ್ರಗ್ಸ್ ಮಾಫಿಯಾದ ಹಿನ್ನೆಲೆಯನ್ನು ಆಧರಿಸಿಕೊಂಡಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಕೆಲವು ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡುವ ಬಗ್ಗೆ ಅವರು ಬೆಳಕು ಚೆಲ್ಲಿದ್ದರು.

