ಟಿಫ್ಲಿಸ್ : ಜಾರ್ಜಿಯಾದ ಪರ್ವತ ರೆಸಾರ್ಟ್ ಗುಡೌರಿಯ ರೆಸ್ಟೋರೆಂಟ್ನಲ್ಲಿ 11 ಭಾರತೀಯರು ಸೇರಿ ಹನ್ನೆರಡು ಜನ ಶವವಾಗಿ ಪತ್ತೆಯಾಗಿದ್ದಾರೆ. ಇತರ ಸಾಧ್ಯತೆಗಳನ್ನು ಸಹ ಅನ್ವೇಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರೆಲ್ಲರೂ ರೆಸ್ಟೋರೆಂಟ್ ಉದ್ಯೋಗಿಗಳು ಎಂದು ತಿಳಿದುಬಂದಿದೆ.
ಅವರು ಕಟ್ಟಡದ ಎರಡನೇ ಮಹಡಿಯಲ್ಲಿರುವ ತಮ್ಮ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಕೊಠಡಿಗಳ ಬಳಿ ಜನರೇಟರ್ ಅಳವಡಿಸಲಾಗಿದೆ. ಹಿಂದಿನ ದಿನ ವಿದ್ಯುತ್ ಕಡಿತಗೊಂಡಾಗ ಜನರೇಟರ್ ಆನ್ ಆಗಿತ್ತು. ಅದರಿಂದ ಬಂದ ವಿಷಕಾರಿ ಹೊಗೆಯೇ ಸಾವಿಗೆ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ.
ಇಲ್ಲಿನ ರೆಸಾರ್ಟ್‌ನಲ್ಲಿ ಸಿಕ್ಕ ಭಾರತೀಯರ ಶವಗಳ ಪ್ರಾಥಮಿಕ ತಪಾಸಣೆಯಲ್ಲಿ ಶವಗಳ ಮೇಲೆ ಯಾವುದೇ ಗಾಯಗಳು, ಹಿಂಸೆ ಇನ್ನಿತರ ಹಲ್ಲೆಯ ಚಿಹ್ನೆಗಳು ಕಂಡು ಬಂದಿಲ್ಲ. ಮೃತರು ರೆಸಾರ್ಟ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷವಾಯು ಸೇವಿಸಿ ಮೃತಪಟ್ಟಿರಬಹುದೆಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆ ಮಾಹಿತಿ ನೀಡಿದೆ. ಈ ಕುರಿತು ಪೊಲೀಸರ ಮಾಹಿತಿಯ ಅಂಶಗಳನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಾರ್ಬನ್ ಮಾನಾಕ್ಸೈಡ್ ವಿಷದಿಂದಾಗಿ ಸಾವು :
ಜಾರ್ಜಿಯಾದ ಗುಡೌರಿ ಮೌಂಟೇನ್ ರೆಸ್ಟೋರೆಂಟ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷದಿಂದ 12 ಜನರು ದುರಂತವಾಗಿ ಸಾವನ್ನಪ್ಪಿದ್ದಾರೆ. ಈ 12 ಜನರಲ್ಲಿ 11 ಮಂದಿ ಭಾರತದ ಪಂಜಾಬ್ನವರು ಎಂದು ಮೂಲಗಳು ತಿಳಿಸಿವೆ.
ಜಾರ್ಜಿಯಾದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಟಿಬಿಲಿಸಿಯಲ್ಲಿನ ಭಾರತೀಯ ಮಿಷನ್ ಮೃತಪಟ್ಟವರ ಕುಟುಂಬಗಳಿಗೆ ನೆರವು ನೀಡುತ್ತಿದೆ. ಮೂಲಗಳ ಪ್ರಕಾರ, ಕಾರ್ಬನ್ ಮಾನಾಕ್ಸೈಡ್ ವಿಷ ಸೇವನೆಯಿಂದ ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.