ವಿಜಯಪುರ: ವಿಜಯಪುರ ನಗರದ 18 ವರ್ಷದ ಸಮೈರಾ ಹುಲ್ಲೂರ್ ವಾಣಿಜ್ಯ ಪೈಲಟ್ ಲೈಸೆನ್ಸ್ (ಸಿಪಿಎಲ್) ಹೊಂದಿರುವ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿಮಾನಯಾನ ವಲಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದ್ದಾರೆ.ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ, ಅತಿ ಚಿಕ್ಕ ವಯಸ್ಸಿನಲ್ಲೇ ಸಿಪಿಎಲ್ ಪಡೆಯುವ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.
ಸಮೀರಾ ಅವರ ವಾಯುಯಾನ ಪ್ರಯಾಣವು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಆರು ತಿಂಗಳ ಕಠಿಣ ತರಬೇತಿ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಆಕೆ ತನ್ನ ಮೊದಲ ಪ್ರಯತ್ನದಲ್ಲೇ ಎಲ್ಲಾ CPL ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣಳಾಗಿದ್ದಾಳೆ.
ತರಬೇತಿ ಅವಧಿಯಲ್ಲಿ ಆಕೆ ಸಣ್ಣ ವಿಮಾನವನ್ನು ಹಾರಿಸುವುದನ್ನು ಒಳಗೊಂಡಂತೆ ಆರು ಕಡ್ಡಾಯ ಕೋರ್ಸ್‌ಗಳಿಗೆ ಒಳಗಾಗಿದ್ದಾಳೆ. 200 ಗಂಟೆಗಳ ಹಾರಾಟದ ಅನುಭವವನ್ನೂ ಪಡೆದಿದ್ದಾಳೆ. ಯಾವ ಹುಡುಗಿಯೂ ಇದುವರೆಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಕಾರಣ ವಿಜಯಪುರಕ್ಕೆ ಈಕೆಯ ಸಾಧನೆ ಹೆಮ್ಮೆ ತಂದಿದೆ. “ಈಗ, ನಾನು ದೇಶದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್” ಎಂದು ಸಮೈರಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.