ಗಾಜಿಯಾಬಾದ್, ಫೆ. 4: ಆನ್‌ಲೈನ್ ಗೇಮ್ ಆಡಬೇಡಿ ಎಂದು ಪೋಷಕರು ಸೂಚಿಸಿದ್ದಕ್ಕೆ ಮನನೊಂದ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ತಡರಾತ್ರಿ ಬಾಲ್ಕನಿಯಿಂದ ಕೆಳಗೆ ಹಾರಿದ ಈ ಮೂವರು ಸಹೋದರಿಯರನ್ನು ಪಾಖಿ (12), ಪ್ರಾಚಿ (14) ಹಾಗೂ ವಿಶಿಕಾ (16) ಎಂದು ಗುರುತಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಇವರು ಆನ್‌ಲೈನ್ ವಿಡಿಯೋ ಗೇಮ್‌ಗಳಿಗೆ ತೀವ್ರವಾಗಿ ವ್ಯಸನಿಯಾಗಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ಈ ಸಹೋದರಿಯರು ಆನ್‌ಲೈನ್ ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್‌ಗಳನ್ನು ಆಡುತ್ತಿದ್ದು, ವ್ಯಸನವು ಇಷ್ಟು ಗಂಭೀರವಾಗಿತ್ತು ಎಂದರೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಿ ಹೆಚ್ಚಿನ ಸಮಯವನ್ನು ಆಟದಲ್ಲೇ ಕಳೆಯುತ್ತಿದ್ದರು ಎಂದು ತಿಳಿದುಬಂದಿದೆ.
ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಗಾಜಿಯಾಬಾದ್‌ನ ಭಾರತ್ ಸಿಟಿ ವಸತಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಾಲ್ಕನಿಯಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟುಕೊಂಡು, ಒಬ್ಬೊಬ್ಬರಾಗಿ ಒಂಬತ್ತನೇ ಮಹಡಿಯಿಂದ ಹಾರಿದ್ದಾರೆ ಎನ್ನಲಾಗಿದೆ. ಬಿದ್ದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಬ್ದ ಕೇಳಿ ಸ್ಥಳಕ್ಕೆ ಕುಟುಂಬದವರು ಮತ್ತು ಸ್ಥಳೀಯರು ಆಗಮಿಸುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಪತ್ರ ಅಥವಾ ಯಾವುದೇ ಡಿಜಿಟಲ್ ಪುರಾವೆಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಇಂತಹ ಟಾಸ್ಕ್ ಆಧಾರಿತ ಆಟಗಳಲ್ಲಿ ಅಪಾಯಕಾರಿ ಸವಾಲುಗಳು ಇರುವ ಸಾಧ್ಯತೆ ಇದ್ದು, ಅಂತಿಮ ಟಾಸ್ಕ್ ಪೂರ್ಣಗೊಳಿಸುವ ಒತ್ತಡ ಅಥವಾ ಆಟದ ಪ್ರಭಾವದಿಂದ ಈ ತೀವ್ರ ಹೆಜ್ಜೆ ಇಟ್ಟಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕೋನಗಳಿಂದ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ.

