ಬೆಂಗಳೂರು, ಜನವರಿ 12: ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ 219ನೇ ಫಲಪುಷ್ಪ ಪ್ರದರ್ಶನವನ್ನು ಜ.14ರಿಂದ 26ರವರೆಗೆ ಆಯೋಜಿಸಲಾಗಿದೆ. ಈ ಬಾರಿ ಪ್ರಸಿದ್ಧ ಸಾಹಿತಿ ಹಾಗೂ ಪರಿಸರ ಪ್ರೇಮಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನಾಧಾರಿತ ಥೀಮ್‌ನಲ್ಲಿ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಕುಟುಂಬ ಸದಸ್ಯರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉದ್ಘಾಟನೆಯ ಬಳಿಕ ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ. 1912ರಲ್ಲಿ ಮೊದಲ ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆದಿದ್ದು, ಇದೀಗ 219ನೇ ಪ್ರದರ್ಶನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಗಾಜಿನ ಮನೆಯಲ್ಲಿ ತೇಜಸ್ವಿ ಅವರ ಜೀವನವನ್ನು ಪ್ರತಿಬಿಂಬಿಸುವ ವಿಶಿಷ್ಟ ಹೂವಿನ ವಿನ್ಯಾಸಗಳು ಇರಲಿವೆ. ಬೃಹತ್ ಬೆಟ್ಟ, ಹರಿಯುವ ನೀರು, ಪ್ರಾಣಿ–ಪಕ್ಷಿಗಳ ಕಲಾಕೃತಿಗಳು, ತೇಜಸ್ವಿ ಹಾಗೂ ಅವರ ಪತ್ನಿಯ ಪ್ರತಿಕೃತಿ, ‘ಕರ್ವಾಲೋ’ ಕಾದಂಬರಿಯ ಕಾಲ್ಪನಿಕ ಚಿತ್ರಣ, ಬಿಳಿಗಿರಿರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ ಸಂಸ್ಕೃತಿ, ಡೊಳ್ಳು ಕುಣಿತ, ನಂದಿಗಿರಿಧಾಮ ಹಾಗೂ ನಾರುಬೇರಿನ ಪ್ರದರ್ಶನಗಳು ಆಕರ್ಷಣೆಯಾಗಲಿವೆ.
ತಮಿಳುನಾಡು, ಕೇರಳ, ಮಹಾರಾಷ್ಟ್ರ, ಡಾರ್ಜಿಲಿಂಗ್ ಹಾಗೂ ವಯನಾಡು ಪ್ರದೇಶಗಳಿಂದ ಹೂಗಳು ತರಲಾಗುತ್ತಿದ್ದು, 95ಕ್ಕೂ ಹೆಚ್ಚು ವೈವಿಧ್ಯಮಯ ಜಾತಿಯ 32 ಲಕ್ಷಕ್ಕೂ ಅಧಿಕ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ಇದರಲ್ಲಿ ಲಾಲ್‌ಬಾಗ್‌ನಲ್ಲಿ ಬೆಳೆದ 27 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲವರ್ ಶೋಗೆ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹80 ಹಾಗೂ ರಜೆ ದಿನಗಳಲ್ಲಿ ₹100, ಮಕ್ಕಳಿಗೆ ₹30 ದರ ವಿಧಿಸಲಾಗಿದೆ. 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ವೀಕ್ಷಕರಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕಳೆದ ಬಾರಿ ಫಲಪುಷ್ಪ ಪ್ರದರ್ಶನದಿಂದ ₹3.05 ಕೋಟಿ ಆದಾಯ ಲಭಿಸಿದ್ದರೆ, ಈ ಬಾರಿ ₹3.02 ಕೋಟಿ ವೆಚ್ಚದಲ್ಲಿ ಪ್ರದರ್ಶನ ಆಯೋಜಿಸಲಾಗುತ್ತಿದೆ. 10 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ್ ತಿಳಿಸಿದ್ದಾರೆ.

