ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಇಂದು ಬೆಳ್ತಂಗಡಿ ಪೊಲೀಸರ ವಿಚಾರಣೆಗೆ ಗೈರಾಗಿದ್ದಾರೆ. ಈ ಹಿನ್ನೆಲೆ ಪೊಲೀಸರು 2ನೇ ನೋಟಿಸ್ ಜಾರಿ ಮಾಡಿ ಸೆ.25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಇಂದು ತಿಮರೋಡಿ ಬೆಳ್ತಂಗಡಿ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಬೇಕಿತ್ತು. ಆದರೆ ಇಂದು ವಿಚಾರಣೆಗೆ ಬರಲು ಅಸಾಧ್ಯ ಎಂದು ಆಪ್ತರ ಮೂಲಕ ತಿಮರೋಡಿ ಪೊಲೀಸರಿಗೆ ಮನವಿ ಮಾಡಿದ್ದರು.
ಬೆಳ್ತಂಗಡಿ ಪೊಲೀಸರು , ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ತಿಮರೋಡಿ ಮನೆಗೆ ತೆರಳಿ ಎರಡನೇ ನೋಟಿಸ್ ಅಂಟಿಸಿ ಸೆ.25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಸಾಕ್ಷಿಯಾಗಿ ಆಗಮಿಸಿ ಈಗ ಬಂಧನಕ್ಕೆ ಒಳಗಾದ ಚಿನ್ನಯ್ಯನನ್ನು ತಿಮರೋಡಿ ಮನೆಗೆ ಕರೆದುಕೊಂಡು ವಿಶೇಷ ತನಿಖಾ ತಂಡದ ಪೊಲೀಸರು ಮಹಜರು ಮಾಡಿದ್ದರು. ಮಹಜರು ಮಾಡುವ ವೇಳೆ ತಿಮರೋಡಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕಾರಣಕ್ಕೆ ಎಸ್ಐಟಿ ಎಸ್ಪಿ ಸಿ.ಎ. ಸೈಮನ್ ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ARMS ACT 1959(U/S-25(1),25(1-A),24(1-B)(a)) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

