ಚೆನ್ನೈ: ತಮಿಳುನಾಡಿನಲ್ಲಿ ದೇಶದ ಮೊದಲ ಗ್ಲಾಸ್ ಬ್ರಿಡ್ಜ್ ಉದ್ಘಾಟನೆ ಮಾಡಲಾಗಿದೆ. ಕನ್ಯಾಕುಮಾರಿ ಕರಾವಳಿಯಲ್ಲಿರುವ ವಿವೇಕಾನಂದ ಕಲ್ಲಿನ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಆಕರ್ಷಣೆಯ ಗಾಜಿನ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಉದ್ಘಾಟಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ಅವರಿಂದ ಅನಾವರಣಗೊಂಡಿದ್ದ ತಿರುವಳ್ಳುವರ್ ಪ್ರತಿಮೆಯ ಬೆಳ್ಳಿ ಮಹೋತ್ಸವದ ಆಚರಣೆಯೊಂದಿಗೆ, ಡಿಸೆಂಬರ್ 30 ರಂದು ಭಾರತದ ಮೊದಲ ಗಾಜಿನ ಸೇತುವೆಯನ್ನು ಎಂ.ಕೆ ಸ್ಟಾಲಿನ್ ಕನ್ಯಾಕುಮಾರಿಯಲ್ಲಿ ಉದ್ಘಾಟಿಸಿದ್ದಾರೆ. 37 ಕೋಟಿ ರೂಪಾಯಿಗಳ ಯೋಜನೆಯನ್ನು ತಮಿಳುನಾಡು ಸರ್ಕಾರವು ಕೈಗೆತ್ತಿಕೊಂಡಿತ್ತು.
ಗಾಜಿನ ಸೇತುವೆಯು 77 ಮೀಟರ್ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವಿದೆ. ಇದು ಆ ಪ್ರದೇಶದಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133-ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ. ಗಾಜಿನ ಸೇತುವೆಯ ವೀಕ್ಷಣೆಯು ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ.
ಈಗ ಆರಾಮವಾಗಿ ಪ್ರವಾಸಿಗರು ಏಕಕಾಲದಲ್ಲಿ ವಿವೇಕಾನಂದ ಕಲ್ಲಿನ ಸ್ಮಾರಕ ಮತ್ತು ತಿರುವಳ್ಳರ್ ಪ್ರತಿಮೆಯನ್ನು ನೋಡಬಹುದು. ಈ ಹಿಂದೆ, ಪ್ರವಾಸಿಗರು ಕನ್ಯಾಕುಮಾರಿ ಬೋಟ್ ಜೆಟ್ಟಿಯಿಂದ ವಿವೇಕಾನಂದ ಸ್ಮಾರಕಕ್ಕೆ ಮತ್ತು ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರಯಾಣಿಸಲು ದೋಣಿ ಸೇವೆಯನ್ನು ಅವಲಂಬಿಸಬೇಕಾಗಿತ್ತು.
ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದ್ದು, ಪ್ರವಾಸಿಗರಿಗೆ ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕಗಳು ಮತ್ತು ಸುತ್ತಲೂ ಸಮುದ್ರದ ವೀಕ್ಷಣೆಗಾಗಿ ಇದನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 37 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ. ಬೌಸ್ಟ್ರಿಂಗ್ ಕಮಾನನ್ನು ಗಾಜಿನ ಸೇತುವೆಗೆ ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸೇತುವೆ 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ ಎಂಬ ಮಾಹಿತಿಯಿದೆ.

