ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಸಿಂಹಾಚಲಂ ದೇವಾಲಯದ ಗೋಡೆ ಕುಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸಿಂಹಗಿರಿ ಬಸ್ ನಿಲ್ದಾಣದಿಂದ ಘಾಟ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 300 ರೂಪಾಯಿ ಟಿಕೆಟ್ ಗಾಗಿ ಭಕ್ತರು ಸರದಿಯಲ್ಲಿ ನಿಂತಿದ್ದಾಗ ಗೋಡೆ ಕುಸಿದು ಬಿದ್ದಿದೆ. ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಚಂದನಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇವಾಲಯದಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಎಂಟು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ ಹಲವು ಜನರು ಗಾಯಗೊಂಡಿದ್ದಾರೆ. ಚಂದನೋತ್ಸವಂ ಹಬ್ಬದ ಸಂದರ್ಭದಲ್ಲಿ 20 ಅಡಿ ಉದ್ದದ ಗೋಡೆ ಕುಸಿದ ಪರಿಣಾಮವಾಗಿ ಈ ದುರ್ಘಟನೆ ಜರುಗಿದೆ.
ದೇವಾಲಯದ 300 ರೂ. ಟಿಕೆಟ್ ಸರತಿ ಸಾಲಿನ ಈ ಗೋಡೆಯನ್ನು 20 ದಿನಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಅವಶೇಷಗಳಡಿಯಿಂದ ಭಕ್ತರನ್ನು ಕಾಪಾಡಲು ಯತ್ನಿಸಿವೆ. ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ (ಕೆಜಿಹೆಚ್) ದಾಖಲಿಸಲಾಗಿದೆ.
ಘಟನೆಗೆ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. “ಬೆಳಗ್ಗಿನ ಜಾವ 2:30 ರಿಂದ 3:30ರವರೆಗೆ ಧಾರಾಕಾರ ಮಳೆಯಾಗಿದೆ. ಮಳೆಯೊಂದಿಗೆ ಭಾರೀ ಗಾಳಿಯೂ ಇತ್ತು. ಈ ಪ್ರದೇಶಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ನುಗ್ಗಿದೆ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗೋಡೆಯನ್ನು ನಿರ್ಮಿಸಿರುವ ತಳದ ಮಣ್ಣು ಮಳೆಯ ನೀರಿನಿಂದ ಸಡಿಲವಾಗಿರಬಹುದು. ಗಾಳಿಯ ಕಾರಣದಿಂದ ಪೆಂಡಾಲ್‌ಗಳು ಉರುಳಿವೆ” ಎಂದು ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನಯ್ ಚಾನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಎಲ್ಲಾ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗಿದೆ. ರಕ್ಷಣಾ ಕಾರ್ಯ ಮುಕ್ತಾಯಗೊಂಡಿದೆ. ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ವಂಗಲಪುಡಿ ಅವರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಚಂದನೋತ್ಸವಂ ಹಬ್ಬ ಅಥವಾ ಚಂದನ ಯಾತ್ರೆಯನ್ನು ಏಪ್ರಿಲ್ 30ರಂದು ಆಚರಿಸಲಾಗುತ್ತದೆ. ಭಕ್ತರು ವರ್ಷಪೂರ್ತಿ ಶ್ರೀಗಂಧದ ಲೇಪದಿಂದ ಮುಚ್ಚಿದ ನರಸಿಂಹ ದೇವರನ್ನು ನೋಡುತ್ತಾರೆ. ಚಂದನೋತ್ಸವಂ ಸಮಯದಲ್ಲಿ ಗಂಧವಿಲ್ಲದೆ ದೇವರನ್ನು ಕಣ್ಣುಂಬಿಕೊಳ್ಳಬಹುದು.
ದುಃಖ ವ್ಯಕ್ತಪಡಿಸಿದ ಪ್ರರಿಹಾರ ಘೋಷಿಸಿದ ಪ್ರಧಾನಿ :
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗೋಡೆ ಕುಸಿದು ಕುಸಿದು, ಜೀವಹಾನಿಯಾಗಿರುವುದು ತೀವ್ರ ದುಃಖ ತಂದಿದೆ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗೋಡೆ ಕುಸಿದು ಸಂಭವಿಸಿದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ.
ಮೃತರ ಪ್ರತಿ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗೋಡೆ ಕುಸಿದು ಜೀವಹಾನಿಯಾಗಿರುವುದು ತೀವ್ರ ದುಃಖ ತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹೇಳಿದ್ದಾರೆ.

