ಪ್ಯಾರಿಸ್ : ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. ಕ್ರೀಡಾಕೂಟ ಆರಂಭವಾದ 2ನೇ ದಿನವೇ ಭಾರತ ಒಂದೇ ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದುಕೊಡಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಹೆಚ್1 ವಿಭಾಗದ ಫೈನಲ್‌ನಲ್ಲಿ ಶೂಟರ್ ಅವನಿ ಲೆಖರಾ ಚಿನ್ನದ ಪದಕ ಗೆದ್ದು ಬೀಗಿದರೆ, ಮೋನಾ ಅಗರ್ವಾಲ್ ಕಂಚಿನ ಪದಕಕ್ಕೆ ಗುರಿಯಿಟ್ಟರು. ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವನಿ ಇದೀಗ ಮತ್ತೊಂದು ಚಿನ್ನದ ಪದಕದೊಂದಿಗೆ ದಾಖಲೆ ಬರೆದಿದ್ದಾರೆ.
ಸತತ ಎರಡು ಒಲಿಂಪಿಕ್ಸ್ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಸತತವಾಗಿ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ಎರಡನೇ ಭಾರತೀಯ ಪ್ಯಾರಾ-ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಅವನಿ ಲೇಖರಾ ಅವರು ಶುಕ್ರವಾರದಂದು 249.7 ನೊಂದಿಗೆ ಮೂರು ವರ್ಷಗಳ ಹಿಂದೆ ಸ್ಥಾಪಿಸಿದ್ದ 249.6 ರ ಪ್ಯಾರಾಲಿಂಪಿಕ್ಸ್ ದಾಖಲೆಯನ್ನು ಮುರಿದಿದ್ದಾರೆ.
ಇನ್ನೂ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ 3ನೇ ಗುಂಪಿನ ಎ ಪಂದ್ಯದಲ್ಲಿ ಷಟ್ಲರ್ ನಿತೇಶ್ ಕುಮಾರ್, ನೇರ ಸುತ್ತಿನಲ್ಲಿ ಚೀನಾದ ಯಾಂಗ್ ಜಿಯಾನ್ಯುವಾನ್ ಅವರನ್ನ ಸೋಲಿಸಿ ಸೆಮಿಸ್‌ಗೆ ಲಗ್ಗೆಯಿಟ್ಟರು.
ಇತಿಹಾಸ ಬರೆದ ಭಾರತದ ಪ್ರೀತಿಪಾಲ್ :
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಭಾರತದ ಸ್ಟಾರ್ ಅಥ್ಲೀಟ್ ಪ್ರೀತಿ ಪಾಲ್ ಶುಕ್ರವಾರ ಮಹಿಳೆಯರ 100 ಮೀ ಟಿ 35 ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಟ್ಟಿದ್ದಾರೆ.
24 ವರ್ಷದ ಪ್ರೀತಿ ಪಾಲ್ ಉತ್ತರ ಪ್ರದೇಶದ ಮೀರತ್ ಮೂಲದವರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು ಇಂದು ಮಹಿಳೆಯರ 100 ಮೀ ಟಿ 35 ಸ್ಪರ್ಧೆಯನ್ನು ಕೇವಲ 14.21 ಸೆಕೆಂಡ್‌ಗಳೊಂದಿಗೆ ಪೂರ್ಣಗೊಳಿಸಿದ್ದಾರೆ. ಇದು ಅವರ ವೈಯಕ್ತಿಕ ಅತ್ಯುತ್ತಮ ದಾಖಲೆ ಎನಿಸಿಕೊಂಡಿದೆ.

