ನವದೆಹಲಿ: ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ರಾಜ್ಯಸಭಾ ಅಧಿವೇಶನದಲ್ಲಿಂದು ಪಾಲ್ಗೊಂಡಿದ್ದ ಹೆಚ್.ಡಿ ದೇವೇಗೌಡ ಅವರಿಂದು ಶಿರೂರು ಅಂಕೋಲದಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದರು. ಅಧಿವಶೇನದ ಬಳಿಕ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ.
ರಾಜ್ಯದಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣ, ಮುಡ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮ ಕುರಿತ ರಾಜಕೀಯ ಬೆಳವಣಿಗೆಗಳು, ಇಡಿ ಅಧಿಕಾರಿಗಳ ವಿರುದ್ದ ಎಫ್ಐಆರ್, ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ, ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ಆಗಿರುವ ಬೆಳವಣಿಗೆಗಳ ಕುರಿತು ಮೋದಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಮಾಹಿತಿ ನೀಡಿದ್ರೂ ಎನ್ನಲಾಗಿದೆ.
ಇನ್ನು ಈ ಹಿಂದೆಯೂ ಅನೇಕ ಬಾರಿ ಪ್ರಧಾನಿ ಮೋದಿಯವರನ್ನು ದೇವೇಗೌಡರು ಭೇಟಿಯಾಗಿದ್ದರು. ಹೊಸ ಸಂಸತ್ ಭವನಕ್ಕೆ ದೇವೇಗೌಡರು ಬಂದಾಗ ಖುದ್ದು ಮೋದಿಯವರೇ ಅವರನ್ನು ಸ್ವಾಗತಿಸಿದ್ದರು. ತಾವೇ ಅವರನ್ನು ಕುರ್ಚಿ ಮೇಲೆ ಕೂರಿಸಿ ಆತ್ಮೀಯವಾಗಿ ಮಾತನಾಡಿಸಿದ್ದರು.
ಅಮೂಲ್ಯ ಉಡುಗೊರೆ :
ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ʻವಿವೇಕಾನಂದ ರಾಕ್ ಸ್ಮಾರಕʼಕ್ಕೆ ಭೇಟಿ ನೀಡಿದ್ದರು. ಇದರ ನೆನಪಿನಾರ್ಥವಾಗಿ ವಿವೇಕಾನಂದ ಮೂರ್ತಿಯ ಮುಂದೆ ಧ್ಯಾನಸ್ಥರಾಗಿರುವ ಮೋದಿ ಅವರ ಕಲಾಕೃತಿಯನ್ನು ಉಡುಗೊರೆಯಾಗಿ ದೇವೇಗೌಡರು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಮೋದಿ, ಇದು ಕನ್ಯಾಕುಮಾರಿಗೆ ಭೇಟಿ ನೀಡಿದ ಕ್ಷಣಗಳತ್ತ ನನ್ನ ಮನಸ್ಸನ್ನು ಸೆಳೆಯಿತು. ಅದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

