ಬೆಂಗಳೂರು: ನಡುರಸ್ತೆಯಲ್ಲಿ ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದ ರೌಡಿಶೀಟರ್ ಪವನ್ @ಕಡಬು ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ದಾಳಿಗೆ ಪವನ್ ಮುಂದಾಗಿದ್ದಾನೆ. ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಡ್ರಾಗಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಪ್ರಾಣ ರಕ್ಷಣೆಗಾಗಿ ಪವನ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ನಾಗಶ್ ಹಾಗೂ ಗೋವಿಂದ ರಾಜ್ ನಗರ ಇನ್ಸ್ಪೆಕ್ಟರ್ ಸುಬ್ರಮಣ್ಯರಿಂದ ಶೂಟ್ಔಟ್ ನಡೆದಿದೆ. ಆರೋಪಿ ಪವನ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸಸೇ ಕೊಡಿಸಲಾಗುತ್ತಿದೆ.
ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಪವನ್, ಕೆಲವು ದಿನಗಳ ಹಿಂದೆ ಸುಂಕದಕಟ್ಟೆಯ ಬಳಿ ಯುವಕನೊಬ್ಬನನ್ನು ದ್ವೇಷದಿಂದ ಬೆದರಿಸಿ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿ ರಕ್ತ ಬರುವಂತೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದನು.
ಆ ಯುವಕ ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಓಡಿದ್ದಾನೆ. ಈ ಬಗ್ಗೆ ವಿಡಿಯೋ ವೈರಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮೊನ್ನೆ ಈ ರೌಡಿ ಪವನ್ ಸುಂಕದಕಟ್ಟೆ ಬಳಿ ವಿಶ್ವಾಸ್ ಎಂಬ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿ ಪವನ್ ಮೇಲೆ ವಾರೆಂಟ್ ಇದ್ದರೂ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ನಡುವೆ ಯುವಕನನ್ನು ಬೆತ್ತಲೆ ಮಾಡಿ, ಹಲ್ಲೆ ನಡೆಸಿ ಬಳಿಕ ವೀಡಿಯೋ ಹರಿಬಿಟ್ಟು ತಲೆಮರೆಸಿಕೊಂಡಿದ್ದನು.
ರೌಡಿ ಪವನ್ ಅಲಿಯಾಸ್ ಕಡಬು ಮೂಲತ ತುಮಕೂರಿನವನು. ಈತ ರಾಜಗೋಪಾಲನಗರ ಠಾಣೆಯ ರೌಡಿಶೀಟರ್. ಈತನ ವಿರುದ್ಧ ಒಟ್ಟು 12 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ರಾಜಗೋಪಾಲನಗರ ಠಾಣೆಯಲ್ಲಿ 7, ಕಾಮಾಕ್ಷಿಪಾಳ್ಯ 3, ಜ್ಞಾನಭಾರತಿ 1 ಹಾಗೂ ತುಮಕೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ.

