ಹೊಸದಿಲ್ಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಆಯ್ಕೆಯಾಗಿದ್ದಾರೆ. ಸೆ. 17ರಂದು ನಡೆದ ಆಮ್ ಆದ್ಮಿ ಪಾರ್ಟಿಯ ಶಾಸಕಾಂಗ ಸಭೆಯಲ್ಲಿ ಅತಿಶಿ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ದೆಹಲಿಯ ನೂತನ ಮುಖ್ಯಮಂತ್ರಿ ಯಾರೆಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ.
ಬೆಳಗ್ಗೆಯಿಂದ ಕೇಜ್ರಿವಾಲ್ ನಿವಾಸದಲ್ಲಿ ಸಭೆ ನಡೆದಿತ್ತು, ಈ ಅವಧಿಯಲ್ಲಿ ಅನೇಕ ಹೆಸರುಗಳು ಕೇಳಿಬಂದಿದ್ದವು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅತಿಶಿ ಅವರ ಹೆಸರನ್ನು ಮುಂದಿಡಲಾಗಿತ್ತು.ಸಭೆಯಲ್ಲಿ ಅತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದರು ಮತ್ತು ಇತರ ನಾಯಕರು ಅವರನ್ನು ಬೆಂಬಲಿಸಿದರು. ದೆಹಲಿಯ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಪಕ್ಷಕ್ಕೆ ಅಪಾರ ನಿಷ್ಠೆ ತೋರಿದ್ದಾರೆ.
ಸೆ. 15ರಂದು ದೆಹಲಿಯ ಆಮ್ ಆದ್ಮಿ ಪಾರ್ಟಿಯ ಕಚೇರಿಯ ಮುಂದೆ ನಡೆದಿದ್ದ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕರ್ತರ ಸಭೆಯಲ್ಲಿ ಕೇಜ್ರಿವಾಲ್ ಅವರು ತಮ್ಮ ರಾಜೀನಾಮೆಯ ನಿರ್ಧಾರವನ್ನು ಪ್ರಕಟಿಸಿದ್ದರು.
ದೆಹಲಿಯ ಅಬಕಾರಿ ನೀತಿಯಡಿ ಬಂಧನಕ್ಕೀಡಾಗಿದ್ದ ಹಾಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಇತ್ತೀಚೆಗಷ್ಟೇ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ. ನ್ನ ಮೇಲೆ ಕೇಂದ್ರ ಸರ್ಕಾರ, ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಲಾಗಿತ್ತು. ಸುಳ್ಳು ಆರೋಪಗಳನ್ನು ಹೊತ್ತು ನಾನು ಸಿಎಂ ಸ್ಥಾನದಲ್ಲಿ ಕೂರಲು ಇಷ್ಟಪಡುವುದಿಲ್ಲ. ನಾನು ಚುನಾವಣೆಗೆ ಹೋಗುತ್ತೇನೆ.
ಅವಧಿಗೂ ಪೂರ್ವವೇ ಚುನಾವಣೆಗೆ ಹೋಗುತ್ತೇನೆ. ನಾನು ಪ್ರಮಾಣಿಕನೆಂದು ಜನರು ತಿಳಿದಿದ್ದರೆ ನನಗೆ ಹಾಗೂ ನನ್ನ ಪಕ್ಷಕ್ಕೆ ಜನರು ಮತಹಾಕುತ್ತಾರೆ. ಅವರು ಆದೇಶ ಕೊಟ್ಟರಷ್ಟೇ ನಾನು ಮತ್ತೆ ಸಿಎಂ ಸ್ಥಾನಕ್ಕೆ ಬಂದು ಕೂರುತ್ತೇನೆ ಎಂದು ಘೋಷಿಸಿದ್ದರು.

