ವಾಷಿಂಗ್ಟನ್: ನಾವು ಯಾರ ವಿರುದ್ಧವೂ ಅಲ್ಲ. ನಾವೆಲ್ಲರೂ ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಎಲ್ಲಾ ಸಮಸ್ಯೆಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆ 2024ರಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಕ್ವಾಡ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮೂರು ದಿನಗಳ ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಅಮೆರಿಕದ ಫಿಲಡೆಲ್ಫಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು, ಅವರು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಅಮೆರಿಕದ ಡೆಲವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
MQ-9B ಡ್ರೋನ್ ಖರೀದಿ, ರಕ್ಷಣಾತ್ಮಕ ವಿಚಾರಗಳ ಕುರಿತು ಚರ್ಚೆ :
ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಮತ್ತು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳೊಂದಿಗೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಯುಎಸ್-ಭಾರತದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಸುಧಾರಿಸುವ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಇಂಡೋ-ಪೆಸಿಫಿಕ್ ಗಡಿ ಭಾಗದ ಬಗ್ಗೆಯೂ ಉಭಯ ನಾಯಕರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಅವರೊಂದಿಗೆ ಮೋದಿ ವಿಸ್ತ್ರತ ಚರ್ಚೆ ನಡೆಸಿದ್ದಾರೆ. ವ್ಯಾಪಾರ, ಭದ್ರತೆ, ಬಾಹ್ಯಾಕಾಶ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಇನ್ನಷ್ಟು ಗತಿ ಪಡೆಯಲು ಪರಿಶ್ರಮಿಸುತ್ತೇವೆ. ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಭಾರತ ಸದಾ ಗೌರವಿಸುತ್ತದೆ ಎಂದು ಇದೇ ವೇಳೆ ಮೋದಿ ಹೇಳಿದ್ದಾರೆ.
ಭಾರತದಲ್ಲಿ ಕ್ವಾಡ್ ಶೃಂಗಸಭೆ :
2025ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಕ್ವಾಡ್ ಅನ್ನು 2004 ರಲ್ಲಿ ಪ್ರಾರಂಭಿಸಲಾಯಿತು. ಸುನಾಮಿಯಲ್ಲಿ ಜಪಾನ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ಜನರು ಸತ್ತ ನಂತರ, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸಹಾಯಕ್ಕಾಗಿ ಒಂದು ಗುಂಪನ್ನು ರಚಿಸಿದ್ದವು. ಈ ಗುಂಪು ನಂತರ ಕ್ವಾಡ್ ಆಯಿತು. ಕ್ವಾಡ್ ರಚನೆಯನ್ನು ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಪ್ರಾರಂಭಿಸಿದರು. ಮಾತುಕತೆ ಮುಂದುವರಿದಂತೆ 2007ರಲ್ಲಿ ಆರಂಭವಾಯಿತು. ಆದರೆ 2008 ರಲ್ಲಿ ಆಸ್ಟ್ರೇಲಿಯಾ ಹಿಂತೆಗೆದುಕೊಂಡ ನಂತರ ಅದನ್ನು ಮುಚ್ಚಲಾಯಿತು. ಇದನ್ನು 2017 ರಲ್ಲಿ ಮರುಪ್ರಾರಂಭಿಸಲಾಯಿತು.

