ಅಮರಾವತಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪದ ಬೆನ್ನಲ್ಲೇ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ವೆಂಕಟೇಶ್ವರ ಸ್ವಾಮಿಯ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಈ ಸಂಬಂಧ ಪವನ್ ಕಲ್ಯಾಣ್ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ರುಪತಿ ಲಡ್ಡು ಅಂದರೆ, ಅಮೃತ ಸಮವಾಗಿ, ಪರಮ ಪವಿತ್ರವಾಗಿ ಭಾವಿಸಲ್ಪಡುತ್ತದೆ. ಅದು, ಹಿಂದಿನ ಪಾಲಕರ ವಿಕೃತ ಚೇಷ್ಠೆಗಳ ಫಲವಾಗಿ ಅಪವಿತ್ರವಾಗಿದೆ. ಜಂತು ಅವಶೇಷಗಳಿಂದ ಮಲಿನವಾಗಿದೆ. ಮನುಷ್ಯತ್ವವನ್ನು ಕಳೆದುಕೊಂಡವರು ಮಾತ್ರ ಇಂಥಹ ಪಾಪಕಾರ್ಯವನ್ನು ಮಾಡಬಲ್ಲರು. ಈ ಪಾಪವನ್ನು ಮೊದಲೇ ಕಂಡು ಹಿಡಿಯಲಾಗದ್ದು ನಮ್ಮ ದುರಾದೃಷ್ಟವೆಂದು ಹೇಳಬಹುದು.
ಲಡ್ಡು ಪ್ರಸಾದದಲ್ಲಿ ಜಂತು ಅವಶೇಷಗಳಿವೆಯೆಂದು ಗೊತ್ತಾದ ತಕ್ಷಣ ನನ್ನ ಮನಸ್ಸು ವ್ಯಾಕುಲಗೊಂಡಿತು. ಅಪರಾಧಭಾವನೆಗೀಡಾಗಿತ್ತು. ಪ್ರಜೆಗಳ ಕ್ಷೇಮ ಮತ್ತು ಅಭಿವೃದ್ಧಿಗಳ ಬಗ್ಗೇನೇ ಯೋಚನೆ ಮಾಡುತ್ತ ಹೋರಾಡುವ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಈ ವಿಚಾರವನ್ನು ಮೊದಲೇ ಕಂಡುಹಿಡಿಯಲಾಗದ ನನ್ನ ಪರಿಸ್ಥಿತಿಯನ್ನು ಕಂಡು ಅತೀವ ಖೇದವುಂಟಾಗಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕಾಗಿದೆ.
ಈ ಕಾರಣಕ್ಕೆ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪವನ್ನು ಕೈಗೊಂಡಿದ್ದೇನೆ. 22 ಸೆಪ್ಟೆಂಬರ್ 2024 ರಂದು ಅಂದರೆ ಭಾನುವಾರದ ಬೆಳಗ್ಗೆ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ಕೈಗೊಳ್ಳುತ್ತಿದ್ದೇನೆ. ಅಂದಿನಿಂದ ಹನ್ನೊಂದು ದಿನಗಳ ಕಾಲವು ದೀಕ್ಷೆಯನ್ನು ಮಾಡುತ್ತೇನೆ. ಅನಂತರ ತಿರುಮಲ ಶ್ರೀ ವೇಂಕಟೇಶ್ವರ ಸ್ವಾಮಿಯವರ ದರ್ಶನಮಾಡಿಕೊಳ್ಳುತ್ತೇನೆ.
ದೇವರಲ್ಲಿ ನಂಬಿಕೆ ಪಾಪಭೀತಿ ಇಲ್ಲದವರು ಮಾತ್ರ ಇಂಥಹ ಅಕೃತ್ಯಗಳನ್ನು ಮಾಡ ಬಲ್ಲರು. ನನ್ನ ವೇದನೆ ಏನಂದರೆ, ತಿರುಮಲ ತಿರುಪತಿ ದೇವಸ್ಥಾನವೆಂಬ ದೈವಿಕ ವ್ಯವಸ್ಥೆಯಲ್ಲಿ ಬೋರ್ಡ್ ಸದಸ್ಯರಾಗಲಿ ಅಧಿಕಾರಿಗಳು ಉದ್ಯೋಗಿಗಳಾಗಲಿ ಯಾರೂ ಈ ವಿಚಾರವನ್ನು ಕಂಡುಹಿಡಿಯದಿರುವುದು, ನೋಡಿದರೂ ಸುಮ್ಮನಿರುವುದು. ಅಂದಿನ ಪಾಲಕರ ದುರ್ಮಾರ್ಗ ದೌಷ್ಟ್ಯಗಳಿಗೆ ಹೆದರಿಕೊಂಡು ಸುಮ್ಮನಿದ್ದರಬಹುದು. ಕಲಿಯುಗದ ಭೂಲೋಕ ವೈಕುಂಠವೆಂದೇ ಭಾವಿಸುವ ತಿರುಮಲೆಯ ಪವಿತ್ರತೆ ಮತ್ತು ವಿಶಿಷ್ಟತೆತೆಗಳಿಗೆ ಕುಂದು ತರುವಂಥಹ ಈ ಹೀನಾಯವಾದ ಕೆಲಸವು ಹಿಂದು ಧರ್ಮಾವಲಂಬಿಗಳಿಗೆ ಮಾತ್ರವಲ್ಲ ಮನುಷ್ಯತ್ವವಿರುವ ಮಾನವರೆಲ್ಲದಿಗೂ ಖೇದವನ್ನುಂಟುಮಾಡಿತು.
ಲಡ್ಡು ತಯಾರಿಯಲ್ಲಿ ಪ್ರಾಣಿಗಳ ಅವಶೇಷಗಳನ್ನು ಬೆರೆಸಿದ ತುಪ್ಪವನ್ನು ಬಳಸಿದರೆಂಬ ವಿಚಾರವು ತಿಳಿದಾಗಲಿಂದ ಎಲ್ಲರೂ ಕಗ್ಗಾಲಾದರು. ಹಿಂದೂಧರ್ಮವನ್ನು ಅದರ ಸಂಸ್ಕೃತಿಯನ್ನು ಉದ್ದರಿಸಬೇಕಾದ ಕಾಲವಿದು. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳ ಬೇಕಾದ ಕಾಲವಿದು. ನಮ್ಮಧರ್ಮವನ್ನು ನಾವು ಕಾಪಾಡಿಕೊಳ್ಳೋಣ ಎಂದು ನಟ ಪವನ್ ಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಆರೋಪ ಕುರಿತು ಈಗಾಗಲೇ ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.

