ಚಂಡೀಘಡ : ಫ್ರಾನ್ಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ರಾಜಕೀಯ ಕುಸಿಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಬಿಜೆಪಿ ನಾಯಕ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿಯ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಅವರು ಬಿಜೆಪಿ ಪ್ರತಿಸ್ಪರ್ಧಿ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಈ ಬಾರಿ ಒಲಿಂಪಿಕ್ಸ್ನಲ್ಲಿ 50 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಫೋಗಟ್ ಎಲ್ಲರನ್ನು ಮಕಾಡೆ ಮಲಗಿಸಿ ಫೈನಲ್ಗೆ ಪ್ರವೇಶಿಸಿದ್ದರು. ಆದರೆ ದುರಾದೃಷ್ಟ, 50 ಕೆ.ಜಿ ವಿಭಾಗದಲ್ಲಿ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ವಿನೇಶ್ ಫೋಗಟ್ ಅವರನ್ನು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಲಾಗಿತ್ತು.
ಈ ಅನರ್ಹತೆಯ ಬೆನ್ನಲ್ಲೇ ಬೆಳ್ಳಿ ಪದಕಕ್ಕಾಗಿ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಅವರ ಮನವಿಯನ್ನು ಸಿಎಎಸ್ ಕೂಡ ತಿರಸ್ಕರಿಸಿತ್ತು. ಇದರೊಂದಿಗೆ ಒಲಿಂಪಿಕ್ಸ್ ಅಖಾಡದಲ್ಲಿ ಪದಕ ಗೆಲ್ಲುವ ಅವರ ಬಹುಕಾಲದ ಕನಸು ಕೂಡ ಕಮರಿತ್ತು.

