ಬೆಂಗಳೂರು: ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯಲೂ ಸಮಯದ ನಿರ್ಭಂದ ವಿಧಿಸಲಾಗಿದೆ. ರಾತ್ರಿ 10ರ ನಂತರ ಪಟಾಕಿ ಹೊಡೆಯುವಂತಿಲ್ಲ ಮತ್ತು ರಾತ್ರಿ 8 ಗಂಟೆ ಮುನ್ನವೂ ಪಟಾಕಿ ಸಿಡಿಸುವಂತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ರಾತ್ರಿ 8 ರಿಂದ 10ಗಂಟೆ ವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ಸರ್ಕಾರ ಅವಕಾಶ ಕಲ್ಪಿಸಿದೆ.
ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಹಾಗೂ ಸರ್ಕಾರದ ನಿಯಮ ಪಾಲಿಸುವಂತೆ ಪರಿಸರ ಸಚಿವ ಈಶ್ವರ ಖಂಡ್ರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಸಲಹೆ ನೀಡಿದ್ದಾರೆ.
ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡುತ್ತೇವೆ, ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಹಾನಿ ಉಂಟು ಮಾಡದ ಹಸಿರು ಪಟಾಕಿ ಮಾತ್ರವೇ ಸಿಡಿಸಿ ಎಂದು ತಿಳಿಸಿದ್ದಾರೆ.
ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಹಾಗೂ ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ.

