ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತೊಮ್ಮೆ ತಮ್ಮ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹಬ್ಬದ ಸಂಭ್ರಮಾಚರಣ ವೇಳೆ ರಾಯಭಾರ ಕಚೇರಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಈ ದೀಪಾವಳಿ ಆಚರಣೆಯು ಭಾರತೀಯ ಸಂಸ್ಕೃತಿಗೆ ಗೌರವ ಮಾತ್ರವಲ್ಲ, ಎರಡು ದೇಶಗಳ ನಡುವಿನ ಆಳವಾದ ಸ್ನೇಹ ಮತ್ತು ಸಾಂಸ್ಕೃತಿಕ ವಿನಿಮಯದ ಉದಾಹರಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಕ್ರೇಜ್ ಹುಟ್ಟಿಹಾಕಿರುವ ‘ತೌಬಾ ತೌಬಾ’ ಹಿಂದಿ ಹಾಡಿಗೆ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಎರಿಕ್ ಗಾರ್ಸೆಟ್ಟಿ ಕಳೆದ ವರ್ಷ ಮೇ ತಿಂಗಳಲ್ಲಿ ನೇಮಕವಾದಾಗಿನಿಂದ ಭಾರತೀಯ ಸಂಪ್ರದಾಯಗಳನ್ನು ಹೃದಯಪೂರ್ವಕವಾಗಿ ಆಚರಿಸುತ್ತಾರೆ. ಚಿತ್ತರಂಜನ್ ಪಾರ್ಕ್‌ನಲ್ಲಿ ದುರ್ಗಾ ಪೂಜೆಯನ್ನು ಉತ್ಸಾಹದಿಂದ ಆಚರಿಸಿದರು. ಕಳೆದ ವರ್ಷದ ದೀಪಾವಳಿ ಹಬ್ಬದ ಆಚರಣೆ ವೇಳೆ ಎರಿಕ್ ಗಾರ್ಸೆಟ್ಟಿ ಅವರು ಹಿಟ್ ಹಾಡು ‘ಚೈಯ್ಯಾ ಚೈಯಾ’ಗೆ ನೃತ್ಯ ಮಾಡಿದ್ದರು.
ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಣೆಯನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ 600ಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯ ಅಮೆರಿಕನ್ನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

