ಬೆಂಗಳೂರು: ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 6 ಮಂದಿ ನಕ್ಸಲರು ಕೊನೆಗೂ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗತರಾಗಿದ್ದಾರೆ. ಮುಖ್ಯವಾಹಿನಿಗೆ ಬಂದ ಆರು ಮಂದಿ ನಕ್ಸಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗುಲಾಬಿ ಹೂವು ಕೊಟ್ಟು ಸ್ವಾಗತಿಸಿದ್ದಾರೆ. ಇದೇ ವೇಳೆ ನಕ್ಸಲ್ ಹೋರಾಟಗಾರರು ತಮ್ಮ ನಕ್ಸಲ್ ವಸ್ತ್ರಗಳನ್ನು ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದ್ದಾರೆ.
ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ್, ಜಿಶಾ ಶರಣಾದ ನಕ್ಸಲರು. ಪೊಲೀಸ್ ಭದ್ರತೆಯೊಂದಿಗೆ ನಕ್ಸಲರನ್ನು ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಗೆ ಸಂಜೆ ಹೊತ್ತಿಗೆ ಕರೆತರಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ನಕ್ಸಲರು ಭೇಟಿಯಾದರು. ಈ ವೇಳೆ ನಕ್ಸಲರ ಜೊತೆ ಸಿಎಂ ಮಾತುಕತೆ ನಡೆಸಿದರು.
ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ್ದ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿ ಬರಲು ಸಮ್ಮತಿ ಸೂಚಿಸಿದ್ದರು. ‘ಶರಣಾಗತಿ ಮತ್ತು ಪುನರ್‌ವಸತಿ ವಿಶೇಷ ಪ್ಯಾಕೇಜ್’ ಅಡಿಯಲ್ಲಿ ಶರಣಾಗುವಂತೆ ಸರ್ಕಾರ ನೀಡಿದ್ದ ಕರೆಯನ್ನು ಒಪ್ಪಿಕೊಂಡಿದ್ದರು.
ಇಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿರುವ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ರಾಯಚೂರಿನ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗಿದ್ದಾರೆ.
ಪರಮೇಶ್ವರ್ ಪ್ರತಿಕ್ರಿಯೆ :
ಈ ಕುರಿತು ಗೃಹ ಸಚಿವರಾದ ಪರಮೇಶ್ವರ್ ಅವರು ಮಾತನಾಡಿ, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ವಿಕ್ರಂಗೌಡ ಸಾವು ಆದಾಗ, ನೀವೆಲ್ಲ ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‌ಎಫ್ ಹಿರಿಯ ಅಧಿಕಾರಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಕರಣಗಳಿವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು

