ನವದೆಹಲಿ: ಥಾಯ್ಲೆಂಡ್ ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದೆ. ಈ ಬಗ್ಗೆ ಆ ದೇಶದಲ್ಲಿ ಕಾನೂನನ್ನು ಸಹ ಜಾರಿಗೆ ತರಲಾಗಿದೆ. ಇಂದಿನಿಂದ ಅಂದರೆ ಗುರುವಾರದಿಂದ (ಜನವರಿ 23, 2025) ಥಾಯ್ಲೆಂಡ್‌ನಲ್ಲಿ ಸಲಿಂಗಪ್ರೇಮ ವಿವಾಹ ಕಾಯ್ದೆ ಜಾರಿಗೆ ಬಂದಿದ್ದು, ಇದರೊಂದಿಗೆ, ಥೈಲ್ಯಾಂಡ್ ಸಲಿಂಗಪ್ರೇಮ ವಿವಾಹವನ್ನು ಅಂಗೀಕರಿಸಿದ ಆಗ್ನೇಯ ಏಷ್ಯಾದ ಮೊದಲ ದೇಶ ಮತ್ತು ಇಡೀ ಏಷ್ಯಾದಲ್ಲಿ ಮೂರನೇ ರಾಷ್ಟ್ರವಾಗಿದೆ.
ಏಷ್ಯಾದಲ್ಲಿ ಮೊದಲು, ನೇಪಾಳ ಮತ್ತು ತೈವಾನ್ ಸಲಿಂಗಪ್ರೇಮ ವಿವಾಹವನ್ನು ಮಾನ್ಯಗೊಳಿಸಿತ್ತು. ಈಗ ಥೈಲ್ಯಾಂಡ್‌ನಲ್ಲಿ ವಿವಾಹ ಸಮಾನತೆಯ ಕಾಯಿದೆಗೆ ಕಾನೂನು ಮಾನ್ಯತೆ ಸಿಕ್ಕಿದೆ.
ಸಲಿಂಗಿ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವ ಮೂಲಕ ಥೈಲ್ಯಾಂಡ್ ಇತಿಹಾಸ ಸೃಷ್ಟಿಸಿದೆ. ಈ ಹೊಸ ಕಾನೂನಿನ ಪ್ರಕಾರ, ಸಲಿಂಗಿ ದಂಪತಿಗಳು ಇತರ ದಂಪತಿಗಳಿಗೆ ಸಮಾನ ಹಕ್ಕುಗಳನ್ನು ಪಡೆಯಲಿದ್ದಾರೆ. ಇದರಲ್ಲಿ ಆನುವಂಶಿಕ ಹಕ್ಕುಗಳು, ದತ್ತು ಪಡೆಯುವ ಹಕ್ಕು ಮತ್ತು ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸೇರಿವೆ.
ಈ ಹೊಸ ಕಾನೂನಿನ ಅಡಿಯಲ್ಲಿ, ಹಲವಾರು ಸಲಿಂಗಿ ದಂಪತಿಗಳು ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲು ಮುಂದಾಗಿದ್ದಾರೆ. ಬ್ಯಾಂಕಾಕ್‌ನ ಸಿಯಾಮ್ ಪರಾಗನ್‌ನಲ್ಲಿ ಸುಮಾರು 180 ದಂಪತಿಗಳು ತಮ್ಮ ವಿವಾಹವನ್ನು ಆಚರಿಸಲು ಸೇರಿದ್ದರು.
300 ಜೋಡಿಗಳು ಮದುವೆ :
ಇಂದಿನಿಂದ ಥಾಯ್ಲೆಂಡ್ ದೇಶದಲ್ಲಿ ಸಲಿಂಗಪ್ರೇಮ ವಿವಾಹ ಜಾರಿಗೆ ಬಂದಿದ್ದು, ಕಾನೂನು ಜಾರಿಯಾದ ಮೊದಲ ದಿನವೇ 300 LGBTQ+ ಜೋಡಿಗಳು ಮದುವೆಯಾಗುವ ನಿರೀಕ್ಷೆಯಿದೆ. LGBTQ+ ಸಮುದಾಯದ ಜನರು ಇಂದಿನಿಂದ ಥೈಲ್ಯಾಂಡ್‌ನಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಸ್ಥಾನಮಾನವನ್ನು ಪಡೆಯುತ್ತಾರೆ.
ಥೈಲ್ಯಾಂಡ್‌ನಲ್ಲಿ ಸುಮಾರು 20 ವರ್ಷಗಳಿಂದ LGBTQ+ ಸಮುದಾಯವು ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದೆ, ಇದಕ್ಕಾಗಿ ಅನೇಕ ಹೋರಾಟಗಳೂ ನಡೆದಿವೆ ಅನ್ನೋದು ಗಮನಾರ್ಹ. ಹೀಗಾಗಿ ಈ ಹೋರಾಟದ ಫಲವಾಗಿ ಇಂದು ಥಾಯ್ಲೆಂಡ್‌ನಲ್ಲಿ ಸಲಿಂಗ ಪ್ರೇಮ ವಿವಾಹ ಅಧಿಕೃತವಾಗಿ ಕಾನೂನು ಮಾನ್ಯತೆಯ ಮೂಲಕ ಗುರುತಿಸಲ್ಪಟ್ಟಿದೆ. ಈಗ ಥೈಲ್ಯಾಂಡ್‌ನಲ್ಲಿ, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಂದೇ ಲಿಂಗದ ಯಾರಾದರೂ ಮದುವೆಯಾಗಬಹುದು.
ಇಂದು ಅಂದರೆ ಗುರುವಾರ (ಜನವರಿ 23) ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ, ಇದರಲ್ಲಿ ಸುಮಾರು 300 ಜೋಡಿಗಳು ಸಲಿಂಗ ವಿವಾಹ ಆಗಲಿದ್ದಾರೆ. ಮದುವೆಯ ನಂತರ, ದಂಪತಿಗಳಿಗೆ ಎಲ್ಲಾ ಹಕ್ಕುಗಳನ್ನು ನೀಡಲಾಗುತ್ತದೆ. ಮದುವೆ ಸಮಾನತೆಯ ಕಾಯಿದೆಯನ್ನು ಥೈಲ್ಯಾಂಡ್ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದವು. ಇದಲ್ಲದೆ, ಥೈಲ್ಯಾಂಡ್ ಸಂಸತ್ತು ನಾಗರಿಕ ಮತ್ತು ವಾಣಿಜ್ಯ ಸಂಹಿತೆಗೆ ತಿದ್ದುಪಡಿ ಮಾಡಿದೆ.

