ಬೈರುತ್ : ಪೇಜರ್, ವಾಕಿಟಾಕಿ ಸ್ಫೋಟದಿಂದ ಕಂಗಾಲಾಗಿ ಪ್ರತಿಕಾರಕ್ಕೆ ಸಜ್ಜಾಗಿದ್ದ ಹಿಜ್ಜುಲ್ಲಾ ಉಗ್ರರಿಗೆ ಇಸ್ರೇಲ್ ಮತ್ತೊಂದು ಮರ್ಮಾಘಾತ ನೀಡಿದೆ. ಇಸ್ರೇಲ್ ರಕ್ಷಣಾ ಪಡೆ ಯುದ್ಧವಿಮಾನಗಳು ಹಿಜ್ಜುಲ್ಲಾ ಉಗ್ರರ ರಾಕೆಟ್ ಲಾಂಚರ್‌ಗಳನ್ನು ಟಾರ್ಗೆಟ್ ಮಾಡಿ ಉಡೀಸ್ ಮಾಡುವ ಮೂಲಕ ಪ್ರತಿದಾಳಿಗೂ ಮುನ್ನವೇ ಶತ್ರುಗಳಿಗೆ ಯಹೂದಿಗಳು ಶಾಕ್ ನೀಡಿದ್ದಾರೆ.
ಫೈಟರ್ ಜೆಟ್‌ಗಳು ಸುಮಾರು 1,000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದು ಹಾಕಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸಿದ್ಧವಾಗಿದ್ದವು ಎಂದು ಇಸ್ರೇಲಿ ಮಿಲಿಟರಿ ಪಡೆ ಹೇಳಿಕೊಂಡಿದೆ.
ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಜುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಜುಲ್ಲಾ ಶಪಥ ಕೂಡ ಮಾಡಿದೆ.

