ಕಾರವಾರ : ಕಾರವಾರ ನಗರಸಭೆಯ ಮಾಜಿ ಸದಸ್ಯ ಸತೀಶ್ ಕೊಳಂಕರನ್ನು ಕೊಲೆಮಾಡಲಾಗಿದೆ. ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ, ಬಿಎಸ್ ಎನ್ ಎಲ್ ಕಚೇರಿ ಸಮೀಪ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ .
ರವಿವಾರ ಬೆಳಿಗ್ಗೆ ಸ್ವಲ್ಪ ಹೊತ್ತಿನ ಮುಂಚೆ ಈ ಕೊಲೆ ನಡೆದಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಳ್ಳಂಬೆಳಿಗ್ಗೆ ನಡೆದ ಈ ಕೊಲೆಯಿಂದ ಕಾರವಾರಿಗರು ಬೆಚ್ಚಿ ಬಿದ್ದಿದ್ದಾರೆ. ಸ್ಕೂಟಿಯಲ್ಲಿ ಬಂದ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆಂದು ಜನ ಮಾತಾಡಿ ಕೊಳ್ಳುತ್ತಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ಕೊಳಂಕರ್ ನನ್ನು ಪೊಲೀಸರು,ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸತೀಶ ರವಿವಾರ ಬೆಳಗ್ಗೆ ಮಾರುಕಟ್ಟೆ ಬಳಿ ವಾಕಿಂಗ್ ಹೊರಟಿದ್ದರು. ಇದನ್ನು ಗಮನಿಸಿದ ಹಂತಕ ನಗರದ ಬಿಎಸ್ಸೆನ್ನೆಲ್ ಕಚೇರಿ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಗರದಲ್ಲಿ ರವಿವಾರ ಸಂತೆ ಮಾರುಕಟ್ಟೆ ಇರುವುದರಿಂದ ಜನರ ಓಡಾಟ ಹೆಚ್ಚೇ ಇತ್ತು. ಆದರೂ ಜನರ ನಡುವೆಯೇ ರಸ್ತೆಯಲ್ಲೇ ಸತೀಶ್ ರನ್ನು ಕೊಲೆಗೈದಿದ್ದಾನೆ. ಇದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

