ಕಳೆದ ವಾರ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು. ಟ್ಯಾಟೂ ಗುರುತಿನಿಂದ ರಘುವಂಶಿ ಗುರುತನ್ನು ಪತ್ತೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪತಿಯ ಕೊಲೆಗೆ ಸಂಬಂಧಿಸಿ ಪತ್ನಿ ಸೋನಮ್‌ಳನ್ನ ಉತ್ತರ ಪ್ರದೇಶದ ಘಾಜಿಪುರದಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಪತ್ನಿಯೇ ಸುಪಾರಿ ಕೊಟ್ಟು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಸೋನಮ್ ಸಂಪರ್ಕವನ್ನು ಪೊಲೀಸರು ಪರಿಶೀಲಿಸಲು ಮುಂದಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮೇಘಾಲಯ ಪೊಲೀಸ್ ಮಹಾನಿರ್ದೇಶಕಿ ಇದಶಿಶಾ ನೊಂಗ್ರಾಂಗ್, ಸೋನಮ್ ತನ್ನ ಪತಿಯ ಕೊಲೆಯ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಕೊಲೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್ ಮತ್ತು ಮಧ್ಯಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಸೋನಮ್‌ಗೆ ಘಾಜಿಪುರದ ನಂದಗಂಜ್‌ನಲ್ಲಿರುವ ಧಾಬಾ ಗ್ರಾಮದ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು.
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು.
ಇನ್ನೂ ಈ ಪ್ರಕರಣದ ತನಿಖೆ ನಡೆಸಲು ಮೇಘಾಲಯ ಪೊಲೀಸರು ವಿಶೇಷ ತನಿಖಾ ತಂಡವನ್ನ ರಚಿಸಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದ್ದು, ಸೋನಮ್ ಬಗೆಗಿನ ಸ್ಫೋಟಕ ರಹಸ್ಯಗಳನ್ನೂ ಬಯಲಿಗೆಳೆಯುತ್ತಿದ್ದಾರೆ.
ನನ್ನ ಮಗಳು 100% ಮುಗ್ಧೆ :
ನನ್ನ ಮಗಳು ಏಕೆ ಗಂಡನನ್ನ ಕೊಲ್ಲುವ ಕೆಲಸ ಮಾಡ್ತಾಳೆ. ಅವಳು 100% ಮುಗ್ಧೆ, ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ ಎಂದು ಕೊಲೆ ಆರೋಪಿ ಸೋನಮ್ ತಂದೆ ದೇವಿ ಸಿಂಗ್ ಹೇಳಿದ್ದಾರೆ. ಹನಿಮೂನ್ ವೇಳೆ ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತಳಾಗಿರುವ ಸೋನಮ್ ರಘುವಂಶಿಯ ತಂದೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೇಘಾಲಯ ಪೊಲೀಸರು ಆರಂಭದಿಂದಲೂ ಸುಳ್ಳು ಹೇಳುತ್ತಲೇ ಬರ್ತಿದ್ದಾರೆ. ನನ್ನ ಮಗಳಿಗೆ ರಾಜ್ ಕುಶ್ವಾಹನೊಂದಿಗೆ ಸಂಬಂಧವಿತ್ತು ಎಂದು ಹೇಳ್ತಿದ್ದಾರೆ. ಆ ರಾಜ್ ಎಂಬ ಹುಡುಗನನ್ನು ನಾನು ನೋಡಿದ್ದೇನೆ, ನನ್ನೊಟ್ಟಿಗೆ ಕೆಲಸ ಮಾಡ್ತಿದ್ದ. ಆದ್ರೆ ಅವನೇ ಇವನು ಅಂತ ಹೇಳೋಕಾಗಲ್ಲ ಅಂತ ಹೇಳಿದ್ದಾರೆ.

