ಶಿವಮೊಗ್ಗ: ಸ್ನೇಹಿತನ ತೋಟದ ಮನೆಯಲ್ಲಿ ಪಾರ್ಟಿ ನಡೆಸಲು ತೆರಳಿದ್ದ ವೇಳೆ ತಾಲ್ಲೂಕಿನ ಯಡವಾಲದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಶನಿವಾರ ತಡರಾತ್ರಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.
ಯಡವಾಲ ಗ್ರಾಮದ ಕುಮಾರನಾಯ್ಕ ಅವರ ಪುತ್ರ, ಬಿ.ಕಾಂ ಓದುತ್ತಿದ್ದ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಸಾವಿಗೀಡಾದವರು.
ಸ್ನೇಹಿತ ಗೌತಮ್ ಸಹೋದರಿ ಹೆರಿಗೆ ಆಗಿದ್ದು, ಚಿರಂಜೀವಿ ಸೇರಿದಂತೆ ಎಂಟು ಮಂದಿ ಶಿವಮೊಗ್ಗದ ಸೀಗೆಹಟ್ಟಿಯಿಂದ ತಾಯಿ-ಮಗುವನ್ನು ನೋಡಲು ಯಡವಾಲಕ್ಕೆ ಸಂಜೆ ಬೈಕ್ ನಲ್ಲಿ ತೆರಳಿದ್ದರು. ನಂತರ ಎಲ್ಲರೂ ಗೌತಮ್ ಅವರ ಯಡವಾಲದ ತೋಟದ ಮನೆಗೆ ತೆರಳಿ ಅಲ್ಲಿ ಪಾರ್ಟಿ ಮಾಡಲು ಮುಂದಾಗಿದ್ದರು.
ಅಲ್ಲಿಯೇ ಅಡುಗೆ ಮಾಡಿ ಪಾನಗೋಷ್ಠಿ ಕೂಡ ನಡೆಸಿದ್ದರು. ಈ ವೇಳೆ ಚಿರಂಜೀವಿ ಬಹಿರ್ದೆಸೆಗೆ ಹೋಗಲು ಮುಂದಾಗಿದ್ದು, ಆತನನ್ನು ಗೌತಮ್ ಕರೆದೊಯ್ದಿದ್ದಾನೆ. ಪಕ್ಕದಲ್ಲಿ ಗೌತಮ್ ಚಿಕ್ಕಪ್ಪನ ಜಮೀನಿನಲ್ಲಿದ್ದ ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳುವಾಗ ಚಿರಂಜೀವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಗೌತಮ್ ಕೂಡ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಕುಂಸಿ ಠಾಣೆ ಪೊಲೀಸರು, ಭಾನುವಾರ ಶವಗಳನ್ನು ಕೃಷಿ ಹೊಂಡದಿಂದ ಮೇಲೆ ತೆಗೆದಿದ್ದಾರೆ. ಮೃತ ಯುವಕರ ಕುಟುಂಬದವರ ರೋದನೆ ಮುಗಿಲುಮುಟ್ಟಿತ್ತು, ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

