ಹಾಸನ: ಪ್ರಜ್ವಲ್ ರೇವಣ್ಣಗೆ (Prajwal Revanna) ಸೇರಿದೆ ಎನ್ನಲಾದ ಅಶ್ಲೀಲ ವೀಡಿಯೋಗಳಿರುವ ಪೆನ್ ಡ್ರೈವ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಐಟಿಗೆ (SIT) ಈಗ ಹೊಸ ತಲೆನೋವು ತರಿಸಿದೆ.
ಏಪ್ರಿಲ್ 21ರಂದು ಸ್ಫೋಟಗೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳಲ್ಲಿ ಹಲವಾರು ಮಹಿಳೆಯರ ಅಶ್ಲೀಲ ವೀಡಿಯೋ ಎಲ್ಲೆಡೆ ಹರಿದಾಡುತ್ತಿವೆ. ಇದುವರೆಗೂ ಓರ್ವ ಸಂತ್ರಸ್ತೆ ಮಾತ್ರ ದೂರು ನೀಡಿದ್ದು, ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಅವರ ಹೇಳಿಕೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿರುವ SIT ಅಧಿಕಾರಿಗಳು ಯಾವ ಕ್ಷಣದಲ್ಲಾದರೂ ಸಂತ್ರಸ್ತೆಯ ಕರೆತಂದು ಸ್ಥಳ ಮಹಜರು ಮಾಡಲಿದ್ದಾರೆ. ಸಂತ್ರಸ್ತೆ ದೂರು ನೀಡಿರುವ ಪ್ರಕಾರ ಹೊಳೆನರಸೀಪುರದ ಎಚ್.ಡಿ.ರೇವಣ್ಣ (HD.Revanna) ಅವರ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದು ಎಚ್.ಡಿ.ರೇವಣ್ಣ ನಿವಾಸದಲ್ಲಿ ಸ್ಪಾಟ್ ಇನ್ಸ್ಪೆಕ್ಷನ್ ನಡೆಸಲಿದ್ದಾರೆ.
ದೂರುದಾರೆ ಹೊರತುಪಡಿಸಿ ವೀಡಿಯೋದಲ್ಲಿ ಇರುವ ಸಂತ್ರಸ್ತ ಮಹಿಳೆಯರನ್ನು ಸಂಪರ್ಕಿಸಿರುವ ವಿಶೇಷ ತನಿಖಾ ತಂಡ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅನೇಕ ಸಂತ್ರಸ್ತ ಮಹಿಳೆಯರು ಎಐಟಿ ಅಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. ಇನ್ನೂ ಕೆಲವರು ನಮ್ಮ ಹೆಸರು ಬಹಿರಂಗಗೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾರೆ.
ಇದು ವಿಶೇಷ ತನಿಖಾ ತಂಡಕ್ಕೆ ದೊಡ್ಡ ತಲೆ ನೋವಾಗಿದೆ. ಇದಲ್ಲದೇ ವೀಡಿಯೋದಲ್ಲಿರುವ ಹಲವು ಸಂತ್ರಸ್ತೆಯರು ತನಿಖೆಗೆ ಹೆದರಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಐಟಿ ತಂಡ ಹಲವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲೆವನ್ನೂ ಒಳಗೊಂಡು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಆದರೆ ಇದುವರೆಗೂ ಓರ್ವ ಸಂತ್ರಸ್ತೆ ಮಾತ್ರ ದೂರು ನೀಡಿದ್ದಾರೆ.

