ರಾಯಚೂರು: ಮಹಿಳೆಯೊಬ್ಬಳು ಸೆಲ್ಫಿ ತೆಗೆದುಕೊಳ್ಳೋಣ ಅಂತ ಹೇಳಿ ಗಂಡನನ್ನ ನದಿಯ ಬಳಿ ಕರೆದುಕೊಂಡು ಹೋಗಿ ತಳ್ಳಿರೋ ಘಟನೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ನಡೆದಿದೆ. ಬಿಡ್ಜ್ ಮೇಲೆ ನಿಂತು ತಾನೇ ಮೊದಲು ಫೋಟೋ ತೆಗೆಸಿಕೊಂಡಿದ್ದ ಪತ್ನಿ ನಂತರ ಪತಿಯನ್ನ ಬ್ರಿಡ್ಜ್ ತುದಿಗೆ ಹೋಗಿ ನಿಲ್ಲಲು ಹೇಳಿದ್ದಾಳೆ. ಇದೇ ವೇಳೆ ಪತಿಯನ್ನು ಕೆಳಕ್ಕೆ ತಳ್ಳಿದ್ದಾಳೆ ಎನ್ನಲಾಗ್ತಿದೆ. ಕೃಷ್ಣಾ ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆ ವ್ಯಕ್ತಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದಾನೆ.
ತಾತಪ್ಪ ಹೇಗೋ ಪ್ರಯಾಸಪಟ್ಟು ಈಜಿಕೊಂಡು ಹೋಗಿ ಕಲ್ಲು ಬಂಡೆಯ ಮೇಲೆ ಕುಳಿತು ರಕ್ಷಣೆಗಾಗಿ ಕೂಗಿದ್ದಾರೆ. ದಾರಿಹೋಕರು ಇದನ್ನು ಗಮನಿಸಿ ಸ್ಥಳೀಯರಿಂದ ಹಗ್ಗ ತರಿಸಿ ಎರಡು ಗಂಟೆ ಪ್ರಯಾಸಪಟ್ಟು ರಕ್ಷಣೆ ಮಾಡಿದ್ದಾರೆ. ರಾಯಚೂರಿನ ಶಕ್ತಿನಗರಮೂಲದ ತಾತಪ್ಪ ಜೀವ ಉಳಿಸಿಕೊಂಡಿರುವ ಪತಿ.
ಏಪ್ರಿಲ್ 10 ಶಕ್ತಿನಗರ ತಾತಪ್ಪ ಹಾಗೂ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗ್ರಾಮವೊಂದರ ಗದ್ದೆಮ್ಮ ಅವರ ವಿವಾಹವಾಗಿದೆ. ಮೂರೇ ತಿಂಗಳಲ್ಲಿ ಘಟನೆ ನಡೆದಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ದಂಪತಿಯ ಎರಡು ಕುಟುಂಬಗಳು ಮಾತುಕತೆ ನಡೆಸಿದ್ದು, ನಂತರ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೆಲ್ಲವನ್ನೂ ಸಹಜವೆನ್ನುವಂತೆ ಪತ್ನಿ ನೋಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ನದಿಗೆ ಬಿದ್ದಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ವಿಷಯ ಬಯಲಿಗೆ ಬಂದಿದೆ. ‘ನನ್ನ ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಾಳೆ’ ಎಂದು ತಾತಪ್ಪ ಹೇಳುವ, ‘ತಾತಪ್ಪನೇ ಆಯತಪ್ಪಿ ನದಿಗೆ ಬಿದಿದ್ದಾರೆ’ ಎಂದು ಗದ್ದೆಮ್ಮ ಉತ್ತರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬ್ಯಾರೇಜ್‌ನಲ್ಲಿ ಮುಂಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇಲ್ಲಿ ಮೊಸಳೆಗಳೂ ಅಧಿಕ ಸಂಖ್ಯೆಯಲ್ಲಿವೆ. ತಾತಪ್ಪ, ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ :
ತಾಲ್ಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಪೊಟೊ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

