ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡದೇ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಮಂಗಳವಾರ ಬೆಳಗಾವಿಯಲ್ಲಿ ಭಾರೀ ಪ್ರತಿಭಟನೆ ನಡೆಸಿ, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು. ಹಲಗಾ ಗ್ರಾಮದ ಬಳಿ ಪೊಲೀಸರ ತಡೆ ಎದುರಿಸಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನು ವಿಜಯೇಂದ್ರ ನೇತೃತ್ವ ವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಹಸಿರು ಟಾವೆಲ್‌ಗಳನ್ನು ಗಾಳಿಯಲ್ಲಿ ತಿರುಗಿಸಿ ಎಚ್ಚರಿಕೆ ಸಂದೇಶ ರವಾನಿಸಿದರು. ಬಳಿಕ ಸುಮಾರು 2 ಕಿಮೀ ಉದ್ದದ ಮೆರವಣಿಗೆ ಮೂಲಕ ಸುವರ್ಣಸೌಧದತ್ತ ಯಾತ್ರೆ ಆರಂಭಿಸಲಾಯಿತು.
ಹಲಗಾ ಸಮೀಪ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಮೆರವಣಿಗೆಯನ್ನು ಪೊಲೀಸರು ತಡೆದರೆ, ಬಿಜೆಪಿ ನಾಯಕರನ್ನು ಪೊಲೀಸ್ ವಾಹನದಲ್ಲಿ ಸೇರಿಸಿ ವಶಕ್ಕೆ ಪಡೆದರು.
ವಿಜಯೇಂದ್ರ ಭಾಷಣ : ಸರ್ಕಾರ ರೈತ ವಿರೋಧಿ
ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, “ಕಳೆದ ಎರಡು ವರ್ಷಗಳಲ್ಲಿ 2,500ಕ್ಕೂ ಅಧಿಕ ರೈತರು, 30ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರದ ನಿರ್ಲಕ್ಷ್ಯ ಮುಂದುವರೆದಿದೆ. ಅವೈಜ್ಞಾನಿಕ ಬೆಳೆ ಪರಿಹಾರ ಘೋಷಿಸಿ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರದ ಪರಿಹಾರ ಎನ್ನುವುದು ನಾಚಿಕೆಯ ಸಂಗತಿ. 2,400 ರೂ. ದರ ನಿಗದಿ ಮಾಡಿದ ಮೆಕ್ಕೆಜೋಳವನ್ನು ರೈತರು 1500–1600 ರೂ.ಗೆ ದಲ್ಲಾಳಿಗಳಿಗೆ ಮಾರುವ ಪರಿಸ್ಥಿತಿ ಬಂದಿದೆ. ತೊಗರಿ, ಅಡಿಕೆ ಬೆಳೆಗೂ ಯಾವುದೇ ನೆರವು ಇಲ್ಲ” ಎಂದು ಕಿಡಿಕಾರಿದರು.
“ಸಿಎಂ ಆಗಿರೋದು ಎಷ್ಟು ವರ್ಷ ಎಂಬುದು ಮುಖ್ಯವಲ್ಲ; ರೈತರ ಸಂಕಷ್ಟಕ್ಕೆ ಎಷ್ಟು ಸ್ಪಂದಿಸಿದ್ದಾರೆ ಎಂಬುದು ಮುಖ್ಯ” ಎಂದು ಸಿದ್ದರಾಮಯ್ಯ ಕುಟುಂಬವನ್ನು ಟಾರ್ಗೆಟ್ ಮಾಡಿದರು.
‘ಎಲ್ಲೆಡೆ ರೈತರಿಗೆ ಸಮಸ್ಯೆ ಇದ್ದರೂ ನಾನು ಬರುವೆ’ — ವಿಜಯೇಂದ್ರ ಭರವಸೆ
“ಸಚಿವರು ಹೆಲಿಕಾಪ್ಟರ್‌ನಲ್ಲಿ ಮಾತ್ರ ಓಡಾಡುತ್ತಿದ್ದಾರೆ. ರೈತರ ನಡುವೆ ಹೋಗುವ ಧೈರ್ಯ ಅವರಿಗಿಲ್ಲ. ರಾಜ್ಯದಲ್ಲಿ ರೈತರ ಹೋರಾಟವಾಗಲಿ, ಸಂಕಷ್ಟವಾಗಲಿ — ಬಿಜೆಪಿಯ ವಿಜಯೇಂದ್ರ ಅಲ್ಲಿರ್ತಾರೆ” ಎಂದು ಭರವಸೆ ನೀಡಿದರು.
ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ-ಮರ್ಯಾದೆ ಇದೆಯೇ? ಸರ್ಕಾರ ಸತ್ತು ಹೋಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಅಸ್ಥಿರ ಸ್ಥಿತಿಯಲ್ಲಿ ಇದ್ದಾರೆ” ಎಂದು ಕಟುವಾಗಿ ಟೀಕಿಸಿದರು.
“ಯಡಿಯೂರಪ್ಪ ಜಾರಿಗೆ ತಂದ ಯೋಜನೆಗಳನ್ನು ನೀವು ನಿಲ್ಲಿಸಿದ್ದೀರಿ. ಬೆಳೆ ಪರಿಹಾರವನ್ನೂ ನೀಡಿಲ್ಲ. ಕೇಂದ್ರಕ್ಕೆ ಯಾವ ಮುಖ ತೋರಿಸಿ ಪರಿಹಾರ ಕೇಳುತ್ತೀರಿ? ಖಜಾನೆ ಖಾಲಿ–ಕಾಂಗ್ರೆಸ್ ಜಾಲಿ ಎಂಬಂತಾಗಿದೆ” ಎಂದು ಅಶೋಕ್ ಕಿಡಿಕಾರಿದರು.
“ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಇದು ಮನೆಗೆ ಹೊರಟ ಸರ್ಕಾರ. ಮುಂಬರುವ ದಿನಗಳಲ್ಲಿ ರೈತಪರ ಬಿಜೆಪಿ–ಜೆಡಿಎಸ್ ಸರ್ಕಾರ ಬರುತ್ತದೆ” ಎಂಬ ಭವಿಷ್ಯವಾಣಿಯನ್ನೂ ಮಾಡಿದರು.

