ಬೆಂಗಳೂರು : ಕಳೆದ 2 ದಿನಗಳಿಂದ ರಾಜ್ಯದ ಹಲವೆಡೆ ವ್ಯಾಪಕ ಮಳೆ ಆಗುತ್ತಿದ್ದು, ಮುಂದಿನ 2-3 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಲೆನಾಡಿನಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಗಣನೀಯ ಮಳೆ ದಾಖಲಾಗಿದೆ. ಉತ್ತರ ಕನ್ನಡದ ಕಾರವಾರದಲ್ಲಿ 12 ಸೆಂ.ಮೀ., ಕುಮಟಾ, ಅಂಕೋಲಾ, ಮತ್ತು ಕದ್ರಾದಲ್ಲಿ 7 ಸೆಂ.ಮೀ., ಉಡುಪಿಯ ಸಿದ್ದಾಪುರದಲ್ಲಿ 9 ಸೆಂ.ಮೀ., ಕೊಡಗಿನ ಆಗುಂಬೆಯಲ್ಲಿ 7 ಸೆಂ.ಮೀ. ಮಳೆಯಾಗಿದೆ. ಮಲೆನಾಡು ಪ್ರದೇಶಗಳಲ್ಲಿ 5 ಸೆಂ.ಮೀ.ವರೆಗೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜುಲೈ 1 ರಿಂದ 12 ರವರೆಗೆ ಮಳೆ ಕೊರತೆ ಎದುರಿಸಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚಿನ ವಾರದಿಂದ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ 33 ಸೆಂ.ಮೀ., ಉಡುಪಿಯಲ್ಲಿ 39 ಸೆಂ.ಮೀ., ಮತ್ತು ಉತ್ತರ ಕನ್ನಡದಲ್ಲಿ 23 ಸೆಂ.ಮೀ. ಮಳೆ ದಾಖಲಾಗಿದ್ದು, ಶೇ.12ರಷ್ಟು ಹೆಚ್ಚಿನ ಮಳೆ ಸುರಿದಿದೆ. ಇದರಿಂದ ಕೃಷಿ ಚಟುವಟಿಕೆಗಳು ಬಿರುಸಾಗಿವೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

