ಮಹಾರಾಷ್ಟ್ರ : ಮಹಾರಾಷ್ಟ್ರದ ಮುಂಬೈನ ಗಿರ್ಗಾಂವ್ ನಲ್ಲಿ ಇರುವ ಇಸ್ಕಾನ್ ದೇವಸ್ಥಾನಕ್ಕೆ ಇ ಮೇಲ್ ಬಾಂಬ್ ಬೆದರಿಕೆ ಬಂದಿದ್ದು, ತಮಿಳುನಾಡು ಸರ್ಕಾರ ವಿವಿಧ ಸಮಿತಿಗಳ ಶಿಫಾರಸ್ಸುಗಳನ್ನು ಜಾರಿಗೆ ತರದಿದ್ದರೆ 16 ಒಳಗೆ RDX ತುಂಬಿದ್ದ IED ಬಾಂಬ್ ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಇಮ್ಮಾನುಯೆಲ್ ಸೇಕರನ್ ಎಂಬ ಐಡಿಯಿಂದ ಸಂದೇಶ ಕಳುಹಿಸಲಾಗಿದ್ದು, ತಮಿಳುನಾಡು ಮೂಲದ ಪೊಲೀಸ್ ಸಂಘಟನೆಯ ನಾಯಕ ದಿವಂಗತ ನೈನಾರ್ ದಾಸ್ ಅವರ ಶಿಫಾರಸುಗಳನ್ನು ತಮಿಳುನಾಡಿನ ಡಿಎಂಕೆ ಸರ್ಕಾರ ಜಾರಿಗೆ ತರಬೇಕೆಂದು ಕಳುಹಿಸುವವರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಒಂದು ವೇಳೆ ಶಿಫಾರಸ್ಸುಗಳನ್ನು ಜಾರಿಗೆ ತರದಿದ್ದರೆ RDX ತುಂಬಿದ್ದ IED ಬಾಂಬ್ ಗಳನ್ನು ಬಳಸಿ ಇಡೀ ದೇವಸ್ಥಾನವನ್ನೇ ಉಡಾಯಿಸುವುದಾಗಿ ಬೆದರಿಕೆಯಲ್ಲಿ ತಿಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಇಸ್ಕಾನ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ದೇವಾಲಯದ ಆವರಣದ ಮೂಲೆ ಮೂಲೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಎಲ್ಲೂ ಬಾಂಬ್ ಪತ್ತೆಯಾಗದ ಹಿನ್ನಲೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಲಾಗಿದೆ. ಸದ್ಯ ಅಪರಿಚಿತ ವ್ಯಕ್ತಿಯ ವಿರುದ್ಧ ಗಿರ್ಗಾಂವ್‌ನ ಗಾಮ್‌ದೇವಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

