ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಫಲಿತಾಂಶ (SSLC Exam 3) ಬುಧವಾರ ಪ್ರಕಟವಾಗಿದೆ. ಜುಲೈ 5ರಿಂದ 12ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-3 ನಡೆದಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾದ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಫಲಿತಾಂಶ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in/ ಮತ್ತು https://kseab.karnataka.gov.in/ ಜಾಲತಾಣದಲ್ಲಿ ವೀಕ್ಷಿಸಬಹುದು.
ವಿದ್ಯಾರ್ಥಿಗಳು ತಮ್ಮ ನೊಂದಣಿ ಸಂಖ್ಯೆ, ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ನೋಡಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ – 3 ಅನ್ನು ಜುಲೈ 5ರಿಂದ 12ರವರೆಗೆ ಒಟ್ಟು 644 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಗಿತ್ತು. ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳ 88 ಮೌಲ್ಯಮಾಪನ ಕೇಂದ್ರಗಳಲ್ಲಿ 20,443 ಮೌಲ್ಯಮಾಪಕರಿಂದ ಮೌಲ್ಯಮಾಪನ ನಡೆದಿದೆ.
ಶಾಲೆಗಳ ಕ್ರೋಡೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮಂಡಲಿಯ ಜಾಲತಾಣ https://kseah.karriataka.gov.in ದ ಶಾಲಾ ಲಾಗಿನ್‌ನಲ್ಲಿ ನೀಡಲಾಗುವುದು. ಶಾಲಾ ಹಂತದಲ್ಲಿ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

