ಚಿಲಕಲಡೋನ, ಏಪ್ರಿಲ್ 17: ಮಂತ್ರಾಲಯದ ಗುರು ರಾಯರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ವಾಹನ ಭೀಕರ ಅಪಘಾತಕ್ಕೀಡಾಗಿ ಕನಿಷ್ಠ 8 ಮಂದಿ ಸಾವನ್ನಪ್ಪಿ, 10 ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಕರುನೂಲ್ ಜಿಲ್ಲೆಯ ಚಿಲಕಲಡೋನ ಸಮೀಪ ನಡೆದಿದೆ.
ಲಘು ವಾಣಿಜ್ಯ ವಾಹನ (ಎಲ್‌ಸಿವಿ) ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಐವರು ಮಹಿಳೆಯರು ಸೇರಿದ್ದಾರೆ. ವಾಹನದಲ್ಲಿ ಸುಮಾರು 20 ಮಂದಿ ಪ್ರಯಾಣಿಸುತ್ತಿದ್ದುದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.
ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಯವರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಬೆಳಗಿನ ಜಾವ ಸುಮಾರು 3 ಗಂಟೆಗೆ ಎನ್‌ಎಚ್ 167ನಲ್ಲಿ ಅಪಘಾತ ಸಂಭವಿಸಿದೆ. ಚಾಲಕ ನಿದ್ರಾವಸ್ಥೆಯಲ್ಲಿ ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬ ಅಪ್ರಾಪ್ತ ಬಾಲಕಿ ಮತ್ತು ಇಬ್ಬರು ಪುರುಷರು ಸೇರಿದಂತೆ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿ, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

