ಲಾಹೋರ್, ಏಪ್ರಿಲ್ 16: ಪಾಕಿಸ್ತಾನದ ಲಾಹೋರ್ ನಗರದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಹ-ಸಂಸ್ಥಾಪಕ Amir Hamza ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಸದಾ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದ ಹಮ್ಜಾ ಮೇಲೆ ಅಪರಿಚಿತ ಬಂದೂಕುಧಾರಿಗಳು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಲಾಹೋರ್‌ನ ರಸ್ತೆ ಮೇಲೆ ಸಂಚರಿಸುತ್ತಿದ್ದ ವೇಳೆ ಹಠಾತ್ ಗುಂಡು ಹಾರಿಸಿ ದಾಳಿಕೋರರು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಹಮ್ಜಾವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಇದು ಕಳೆದ ಒಂದು ವರ್ಷದ ಅವಧಿಯಲ್ಲಿ ಹಮ್ಜಾ ಮೇಲೆ ನಡೆದ ಎರಡನೇ ದಾಳಿ ಎನ್ನಲಾಗಿದೆ. ಘಟನೆಯ ಹಿನ್ನೆಲೆ ಹಾಗೂ ದಾಳಿಕೋರರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಭಯೋತ್ಪಾದಕ ಜಗತ್ತಿನಲ್ಲಿ ಹಮ್ಜಾ ಪ್ರಮುಖ ಪಾತ್ರವಹಿಸಿದ್ದ ವ್ಯಕ್ತಿಯಾಗಿದ್ದು, Lashkar-e-Taiba ಸಂಘಟನೆಯ ಸೈದ್ಧಾಂತಿಕ ಪ್ರಚಾರಕನಾಗಿ ಗುರುತಿಸಿಕೊಂಡಿದ್ದ. Hafiz Saeed ನಂತರ ಸಂಘಟನೆಯಲ್ಲಿ ಎರಡನೇ ಅತಿದೊಡ್ಡ ನಾಯಕನೆಂದು ಪರಿಗಣಿಸಲಾಗುತ್ತಿತ್ತು.
ತನ್ನ ಉದ್ರಿಕ್ತ ಭಾಷಣಗಳ ಮೂಲಕ ಯುವಕರನ್ನು ಉಗ್ರಗಾಮಿತ್ವದತ್ತ ಸೆಳೆಯುತ್ತಿದ್ದ ಹಮ್ಜಾ ಹಲವು ಪುಸ್ತಕಗಳನ್ನು ರಚಿಸಿದ್ದಾನೆ. ಜೊತೆಗೆ ಸಂಘಟನೆಯ ಅಧಿಕೃತ ಪತ್ರಿಕೆಯ ಸಂಪಾದಕನಾಗಿಯೂ ಕಾರ್ಯನಿರ್ವಹಿಸಿದ್ದ. ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಿದ್ದ ಕಾರಣಕ್ಕೆ ಅಮೆರಿಕವು ಈತನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಪಟ್ಟಿ ಮಾಡಿದೆ.
ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಗಮನಾರ್ಹ. ಈ ಘಟನೆಯೂ ಅತ್ಯಂತ ಯೋಜಿತ ರೀತಿಯಲ್ಲಿ ನಡೆದಿದ್ದು, Inter-Services Intelligence (ಐಎಸ್‌ಐ)ಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ.
ದಾಳಿಯ ನಂತರ ಲಾಹೋರ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದರೂ, ದಾಳಿಕೋರರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಹಮ್ಜಾ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿದ್ದು, ಈ ಘಟನೆ ಲಷ್ಕರ್ ಸಂಘಟನೆಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

