Tsunami : ರಷ್ಯಾದ ಫಾರ್ ಈಸ್ಟರ್ನ್ ವಲಯದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ( 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಪರಿಣಾಮವಾಗಿ ಸುಮಾರು 4 ಮೀಟರ್ (13 ಅಡಿ) ಎತ್ತರದ ಭಾರಿ ಅಲೆಗಳೊಂದಿಗೆ ಸುನಾಮಿ ಕೂಡ ಎದ್ದಿದೆ.
ಭೂಕಂಪದ ಪರಿಣಾಮವಾಗಿ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಅಲ್ಲದೆ, ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದಲ್ಲಿ ಸುನಾಮಿ ಎದ್ದಿರುವ ಬೆನ್ನಲ್ಲೇ ಅಮೆರಿಕ, ಜಪಾನ್ ಮತ್ತು ಹತ್ತಿರದ ಇತರ ದೇಶಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು 19.3 ಕಿಲೋಮೀಟರ್ (12 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಇದು ಅವಾಚಾ ಕೊಲ್ಲಿಯಲ್ಲಿರುವ ಸುಮಾರು 1,65,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಸುಮಾರು 125 ಕಿಲೋಮೀಟರ್ (80 ಮೈಲುಗಳು) ಪೂರ್ವ-ಆಗ್ನೇಯದಲ್ಲಿದೆ. ಇದು ಭೂಕಂಪನದ ಕೇಂದ್ರ ಬಿಂದುವಾಗಿದ್ದು, 8.0 ರಿಂದ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಮುಂದಿನ ಮೂರು ಗಂಟೆಗಳಲ್ಲಿ “ಅಪಾಯಕಾರಿ ಸುನಾಮಿ ಅಲೆಗಳು” ಏಳಬಹುದೆಂದು ಅಮೆರಿಕದ ಸುನಾಮಿ ವಾರ್ನಿಂಗ್ ಸಿಸ್ಟಮ್ ಎಚ್ಚರಿಕೆ ನೀಡಿದೆ. ವಾಯುವ್ಯ ಹವಾಯಿಯನ್ ದ್ವೀಪಗಳು ಮತ್ತು ರಷ್ಯಾದ ಕರಾವಳಿಯಲ್ಲಿ ಉಬ್ಬರವಿಳಿತದ ಮಟ್ಟಕ್ಕಿಂತ 3 ಮೀಟರ್ (10 ಅಡಿ) ಗಿಂತ ಹೆಚ್ಚಿನ ಅಲೆಗಳು ಏಳಬಹುದು ಎಂದಿದೆ. ಇದಲ್ಲದೆ, ಉಬ್ಬರವಿಳಿತದ ಮಟ್ಟಕ್ಕಿಂತ 0.3 ರಿಂದ 1 ಮೀಟರ್ (1 ರಿಂದ 3.3 ಅಡಿ) ವರೆಗಿನ ಸುನಾಮಿ ಅಲೆಗಳು ಚುಕ್, ಕೊಸ್ರೇ, ಮಾರ್ಷಲ್ ದ್ವೀಪಗಳು, ಪಲಾವ್ ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳನ್ನು ತಲುಪಬಹುದು ಎಂದು ಸಂಸ್ಥೆ ವರದಿ ಮಾಡಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಮತ್ತು ತೈವಾನ್ ಕರಾವಳಿಯಲ್ಲಿ ಸಣ್ಣ ಸುನಾಮಿ ಅಲೆಗಳು – ಉಬ್ಬರವಿಳಿತದ ಮಟ್ಟಕ್ಕಿಂತ 0.3 ಮೀಟರ್ (ಸುಮಾರು 1 ಅಡಿ) ಗಿಂತ ಕಡಿಮೆ ಇರುವ ಮುನ್ಸೂಚನೆ ಇದೆ.
ಜಪಾನ್ ಹವಾಮಾನ ಸಂಸ್ಥೆಯು 0100 GMT ಸುಮಾರಿಗೆ ಜಪಾನ್‌ನ ದೊಡ್ಡ ಕರಾವಳಿ ಪ್ರದೇಶಗಳನ್ನು ಸುನಾಮಿ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಭೂಕಂಪದ ಬಗ್ಗೆ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಮಾಹಿತಿ ನೀಡಲಾಗಿದ್ದು, ಸ್ವಲ್ಪ ಸಮಯದ ಬೆನ್ನಲ್ಲೇ ಸರ್ಕಾರವು ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪ್ರತಿಕ್ರಿಯೆಯನ್ನು ಯೋಜಿಸಲು ತುರ್ತು ಸಮಿತಿಯನ್ನು ರಚಿಸಿದೆ.
ಇಂದಿನ ಭೂಕಂಪವು ಗಂಭೀರವಾಗಿದ್ದು, ದಶಕಗಳ ಭೂಕಂಪಗಳಲ್ಲಿ ಅತ್ಯಂತ ಪ್ರಬಲವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಭೂಕಂಪದಿಂದ ಇಲ್ಲಿಯವರೆಗೆ ಯಾವುದೇ ಗಾಯಗಳು ಸಂಭವಿಸಿಲ್ಲ. ಆದಾಗ್ಯೂ, ಪೀಡಿತ ಪ್ರದೇಶದಲ್ಲಿ ಒಂದು ಶಿಶುವಿಹಾರಕ್ಕೆ ಹಾನಿಯಾಗಿದೆ ಎಂದು ಕಮ್ಚಟ್ಕಾ ಗವರ್ನರ್ ವ್ಲಾಡಿಮಿರ್ ಸೊಲೊಡೊವ್ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
ಭೂಕಂಪ ಮತ್ತು ಸುನಾಮಿ ಬೆದರಿಕೆಯ ನಂತರ, ಸಖಾಲಿನ್ ಪ್ರದೇಶದ ರಷ್ಯಾದ ಸಣ್ಣ ಪಟ್ಟಣವಾದ ಸೆವೆರೊ-ಕುರಿಲ್ಸ್ಕ್‌ನಿಂದ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಸಖಾಲಿನ್ ಗವರ್ನರ್ ದೃಢಪಡಿಸಿದ್ದಾರೆ. ಪ್ರದೇಶದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

