ನವದೆಹಲಿ : ಕೇಂದ್ರ ಸರ್ಕಾರ ರಚಿಸಿದ್ದ ಸಂಸದರ ನಿಯೋಗದಿಂದ ವಿದೇಶಕ್ಕೆ ಹೋಗಿ ಬಂದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಜೊತೆ ಆಪ್ತವಾಗಿ ಗುರುತಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ.
ಹಾಗೇ, ಆಗಾಗ ಪ್ರಧಾನಿ ಮೋದಿಯನ್ನು ಹೊಗಳುತ್ತಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಯವರನ್ನು ಶಶಿ ತರೂರ್ ಭಾರತದ ದೊಡ್ಡ ಆಸ್ತಿ, ಅವರಿಗೆ ಸರಿಯಾದ ಬೆಂಬಲ ಬೇಕಿದೆ ಎಂದು ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಪದೇ ಪದೇ ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದು, “ನಮಗೆ ದೇಶ ಮೊದಲು. ಆದರೆ, ಕೆಲವರಿಗೆ ಮೋದಿಯೇ ಮೊದಲು” ಎಂದು ಲೇವಡಿ ಮಾಡಿದ್ದಾರೆ.
ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಆಪರೇಷನ್ ಸಿಂಧೂರದ ಬಳಿಕ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲು ಆಯ್ಕೆ ಮಾಡಲಾಗಿತ್ತು. ಅದಾದ ನಂತರ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವಿನ ಬಿಕ್ಕಟ್ಟಿನ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆ ಹೊರಬಿದ್ದಿದೆ. ಶಶಿ ತರೂರ್ ಕೂಡ ಕಳೆದ ವಾರ ತಮ್ಮ ಹಾಗೂ ಕಾಂಗ್ರೆಸ್ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳಿರುವುದು ನಿಜ ಎಂದು ಒಪ್ಪಿಕೊಂಡಿದ್ದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, “ಶಶಿ ತರೂರ್ ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ನಾವು ದೇಶಕ್ಕಾಗಿ ಒಟ್ಟಾಗಿ ನಿಂತಿದ್ದೇವೆ ಎಂದು ನಾನು ಗುಲ್ಬರ್ಗದಲ್ಲಿ ಹೇಳಿದ್ದೆ. ಆಪರೇಷನ್ ಸಿಂಧೂರ್‌ನಲ್ಲಿ ನಾವು ಒಟ್ಟಾಗಿ ನಿಂತಿದ್ದೇವೆ. ದೇಶ ಮೊದಲು ಎಂದು ನಾವು ಹೇಳಿದ್ದೇವೆ, ಆದರೆ ಕೆಲವರು ಮೋದಿಯೇ ಮೊದಲು ಎನ್ನುತ್ತಿದ್ದಾರೆ. ಅವರಿಗೆ ಮೋದಿಯಾದ ನಂತರ ದೇಶ ಬರುತ್ತದೆ. ಹಾಗಾದರೆ, ನಾವು ಏನು ಮಾಡಬೇಕು?” ಎಂದು ಪ್ರಶ್ನಿಸಿದ್ದಾರೆ.

