ಬೆಂಗಳೂರು : ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆಯಲು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಸಮಿತಿ ಪರ ವಕೀಲರು ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಮುಷ್ಕರ ಮಾಡದಂತೆ ನಿರ್ದೇಶನ ನೀಡಿ ನೋಟಿಸ್ ಕೊಟ್ಟಿದ್ದರೂ ಮುಷ್ಕರ ನಡೆಸಿದ್ದ ಸಂಘಟನೆಗಳಿಗೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಕೋರ್ಟ್ ಖಡಕ್ ಸೂಚನೆ ನೀಡಿದೆ.
ಇಂದು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್‌ನ ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ ಜೋಷಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದಿದೆ. ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಇನ್ನು ಮುಷ್ಕರಕ್ಕೆ ನೀಡಿದ್ದ ತಡೆಯಾಜ್ಞೆಯನ್ನ 2 ದಿನ ವಿಸ್ತರಣೆ ಮಾಡಿದ್ದು ವಿಚಾರಣೆಯನ್ನ ಆಗಸ್ಟ್ 7 ಕ್ಕೆ ಹೈಕೋರ್ಟ್ ಮುಂದೂಡಿದೆ.
ಹೈಕೋರ್ಟ್ ಮುಷ್ಕರ ನಡೆಸಬಾರದೆಂದು ಆದೇಶ ನೀಡಿದ್ದರೂ, ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಜಾರಿಯಾಗಿದ್ದರೂ ಮುಷ್ಕರ ನಡೆಸುವುದು ಕಾನೂನು ಬಾಹಿರ. ಎಸ್ಮಾ ಕಾಯಿದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು. ನಾಳೆ ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಹೈಕೋರ್ಟ್, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಪರ ವಕೀಲರಿಗೆ ಸೂಚಿಸಿದೆ.
ಅಲ್ಲದೆ ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡದೇ ಇದ್ದರೇ, ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಈ ವೇಳೆ ನಾಳೆ ಸಾರಿಗೆ ನೌಕರರು ಮುಷ್ಕರ ನಡೆಸುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದರು.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಜೆಎಸಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಅವರು, ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಮುಂದೂಡಿಕೆಯಾಗಿದೆ. ಎಲ್ಲಾ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ . ಈ ಕ್ಷಣದಿಂದಲೇ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕರೆ ನೀಡಿದರು.

