ನವದೆಹಲಿ: ರಾಜಕೀಯ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ. ಆದರೆ, ಐಸಿಸಿ ಹಾಗೂ ಏಷ್ಯಾ ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಈ ಎರಡೂ ತಂಡಗಳು ಕಾದಾಟ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಫೆಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಬೇಸರಗೊಂಡಿದೆ.
ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ತಂಡ ಆಡಬಾರದು ಎಂದು ಹಲವರು ಆಗ್ರಹಿಸಿದ್ದರು. ಇದೀಗ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಆಡಬೇಕಾ? ಅಥವಾ ಬೇಡವಾ? ಎಂಬುದನ್ನು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನದ ಮೇಲೆ ವಿಶೇಷ ಗಮನ ಹರಿಸಿ ಮಾಡಲಾದ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಭಾರತದ ಹೊಸ ನೀತಿಯನ್ನು ಕ್ರೀಡಾ ಸಚಿವಾಲಯ ಅನಾವರಣಗೊಳಿಸಿದೆ. ಈ ನೀತಿ ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯದ ಈ ನೀತಿಯು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಯಾವುದೇ ದ್ವಿಕ್ಷೀಯ ಸರಣಿಗಳಲ್ಲಿ ಆಡಲು ಅನುಮತಿ ಇಲ್ಲ. ಆದರೆ, ಐಸಿಸಿ, ಏಷ್ಯಾ ಅಥವಾ ಒಲಿಂಪಿಕ್ಸ್‌ನಂತಹ ಟೂರ್ನಿಗಳಲ್ಲಿ ಮಾತ್ರ ಈ ಎರಡೂ ದೇಶಗಳು ಮುಖಾಮುಖಿಯಾಗಬಹುದು ಎಂದು ತಿಳಿಸಿದೆ.
“ಏಷ್ಯಾ ಕಪ್ ಬಹುಪಕ್ಷೀಯ ಟೂರ್ನಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಆ ಟೂರ್ನಿಯಲ್ಲಿ ಭಾರತ ತಂಡ ಆಡುವುದನ್ನು ತಡೆಯುವುದಿಲ್ಲ. ಆದರೆ, ಪಾಕಿಸ್ತಾನ ತಂಡ ದ್ವಿಪಕ್ಷೀಯ ಸರಣಿಯನ್ನು ಆಡಲು ಭಾರತದ ನೆಲಕ್ಕೆ ಬರಲು ಅನುಮತಿಸುವುದಿಲ್ಲ, ಆದರೆ ನಾವು ಒಲಿಂಪಿಕ್ಸ್ ಚಾರ್ಟರ್ ಅನ್ನು ಅನುಸರಿಸುವುದರಿಂದ ಬಹುಪಕ್ಷೀಯ ಟೂರ್ನಿಗಳಲ್ಲಿ ಆಡುವುದನ್ನು ನಾವು ಎಂದಿಗೂ ತಡೆಯುವುದಿಲ್ಲ,” ಎಂದು ಕ್ರೀಡಾ ಸಚಿವಾಲಯ ಹೇಳಿದೆ.

