ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತ ಹೆಚ್ಚುತ್ತಿವೆ. ಬಿಎಂಟಿಸಿ ಬಸ್‌ಗಳಿಂದ ಸಂಭವಿಸಿದ ಅಪಘಾತದಲ್ಲಿ ಹಲುವಾರು ವಾಹನ ಸವಾರರು, ಪಾದಾಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸಾರ್ವಜನಿಕರು ಬಿಎಂಟಿಸಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಪಡಿಸುತ್ತಿದ್ದಾರೆ. ಈ ಹಿನ್ನೆಲೆ ಬಿಎಂಟಿಸಿ ಸಂಸ್ಥೆ ಬಸ್ ಚಾಲಕರಿಗೆ ಖಡಕ್ ಸೂಚನೆ ನೀಡಿದೆ.
ಎಂಟಿಸಿ ಬಸ್‌ಗಳಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಹೊಸ ನಿಯಮಗಳನ್ನು ರೂಪಿಸಲಾಗಿದೆ. ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಂಚಾರ ನಿಯಂತ್ರಣಾಧಿಕಾರಿಗಳು, ಡಿಪೋ ಮ್ಯಾನೇಜರ್, ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು.
ಕರ್ತವ್ಯನಿರತ ಬಿಎಂಟಿಸಿ ಡ್ರೈವರ್ ಮೊಬೈಲ್‌ನಲ್ಲಿ ಮಾತನಾಡಿದರೆ, ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಚಾಲಕರನ್ನು 15 ದಿನ ಅಮಾನತು ಮಾಡಲಾಗುವುದು. ಚಾಲಕನ ಮೊಬೈಲ್ ವಶಪಡಿಸಿಕೊಳ್ಳಲಾಗುವುದು. ಅಲ್ಲದೇ, ಮತ್ತೊಂದು ಘಟಕಕ್ಕೆ ಡ್ರೈವರ್ ಟ್ರಾನ್ಸ್‌ಫರ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಮದ್ಯಪಾನ ಮಾಡಿ ಬಸ್ ಚಲಾಯಿಸಿದರೆ, ಟಿಕೆಟ್ ಕೇಸ್‌ನಲ್ಲಿ ತಗಲಾಕಿಕೊಂಡರೆ ಹಾಗೂ ಮಾರಣಾಂತಿಕ ಅಪಘಾತ ಮಾಡಿದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಸೋಮವಾರದಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಚಾಲಕರಿಗೆ ಯೋಗ ತರಬೇತಿ ನೀಡಲಾಗುತ್ತದೆ.
ಆಗಸ್ಟ್ ತಿಂಗಳಲ್ಲಿ ಒಟ್ಟು 4 (1 ವಿದ್ಯುತ್‌ಚಾಲಿತ ಬಸ್ಸಿನ ಅಪಘಾತ ಒಳಗೊಂಡಂತೆ) ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 3 ಅಪಘಾತಗಳಲ್ಲಿ ಸಂಸ್ಥೆಯ ಚಾಲಕರು ಹೊಣೆಯಿರುವುದಿಲ್ಲ. 1 ಅಪಘಾತದಲ್ಲಿ ವಿದ್ಯುತ್‌ಚಾಲಿತ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರ ತಪ್ಪು ಎಂದು ಕಂಡುಬಂದಿದೆ. ವಾಹನ ಸವಾರರು ಬಸ್ಸನ್ನು ಹಿಂದಿಕ್ಕುವ ಸಲುವಾಗಿ ಅಥವಾ ಅನ್ಯ ಕಾರಣಗಳಿಂದ, ನಿಯಂತ್ರಣ ಕಳೆದುಕೊಂಡು ಬಸ್ಸಿನ ಹಿಂಬದಿಯ ಚಕ್ರಗಳಿಗೆ ಬಿದ್ದಾಗ, ಬಸ್ಸಿನ ನಿಯಂತ್ರಣ ಚಾಲಕರಿಗೆ ಕಷ್ಟಸಾಧ್ಯವಾಗಿರುತ್ತದೆ ಎಂದು ಗಮನಿಸಲಾಗಿದೆ.

