ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಾಯಿಮರಿ ಉಡುಗೊರೆ ಕೊಟ್ಟಿದ್ದಾರೆ.ಮತಗಳ್ಳತನ ವಿರೋಧಿ ಅಭಿಯಾನದ ಹಿನ್ನೆಲೆಯಲ್ಲಿ ಆಗಸ್ಟ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಹುಲ್ ಗಾಂಧಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ದರು. ಈ ವೇಳೆ ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಯಿಂದಲೇ ಖರ್ಗೆ ಜತೆ ಸದಾಶಿವನಗರ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಖರ್ಗೆ ಕುಟುಂಬಕ್ಕೆ ಮುದ್ದಾದ ನಾಯಿಮರಿಯನ್ನು ಗಿಫ್ಟ್ ನೀಡಿದ್ದಾರೆ.
ಈ ಹಿಂದೆ ಅಂದರೆ, 2023 ಅಕ್ಟೋಬರ್ ತಿಂಗಳ ವಿಶ್ವ ಪ್ರಾಣಿಗಳ ದಿನದಂದು ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ‘ನೂರಿ’ ಎಂಬ ಜಾಕ್ ರಸೆಲ್ ಟೆರಿಯರ್ ತಳಿಯ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ನಾಯಿಮರಿಯನ್ನು ರಾಹುಲ್ ಗಾಂಧಿ ಅವರು ಆಗಸ್ಟ್ 2023ರಲ್ಲಿ ಗೋವಾದ ಮಾಪುಸಾದ ಒಂದು ಡಾಗ್ ಕೆನೆಲ್‌ನಿಂದ ತಂದಿದ್ದರು. ಅವರು ಈ ಹೃದಯಸ್ಪರ್ಶಿ ಕ್ಷಣವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದರು.
ರಾಹುಲ್ ಗಾಂಧಿ ನೂರಿಯನ್ನು ಗೋವಾದಿಂದ ದೆಹಲಿಗೆ ತಂದು, ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡುವ ದೃಶ್ಯವಿದೆ. ಸೋನಿಯಾ ಗಾಂಧಿ ನಾಯಿಮರಿಯನ್ನು ನೋಡಿ “ಇದು ತುಂಬಾ ಮುದ್ದಾಗಿದೆ” ಎಂದು ಸಂತೋಷದಿಂದ ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ರಾಹುಲ್ ಗಾಂಧಿ “ನೂರಿ ನಮ್ಮ ಕುಟುಂಬದ ಅತ್ಯಂತ ಮುದ್ದಾದ ಸದಸ್ಯ” ಎಂದು ಬರೆದಿದ್ದರು.

