ನವದೆಹಲಿ : ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಚೋರಿಗಳನ್ನು ರಕ್ಷಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಅಳಿಸುವ ಮತ್ತು ಸೇರಿಸುವಲ್ಲಿ ವಂಚನೆ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗ ಪ್ರತಿಕ್ರಿಯೆ :
ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ತಪ್ಪಾಗಿದ್ದು ಆಧಾರರಹಿತವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ.ರಾಹುಲ್ ಗಾಂಧಿ ಆರೋಪಿಸಿದಂತೆ ಸಾರ್ವಜನಿಕರು ಯಾವುದೇ ಮತವನ್ನು ಆನ್‌ಲೈನ್‌ನಲ್ಲಿ ಅಳಿಸಲು ಸಾಧ್ಯವಿಲ್ಲ. ವ್ಯಕ್ತಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
2023 ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದಿದೆ. ಈ ಕ್ಷೇತ್ರದಿಂದ 2018 ರಲ್ಲಿ ಬಿಜೆಪಿಯ ಸುಭಾಷ್ ಗುತ್ತೇದಾರ್ ಗೆದ್ದಿದ್ದರೆ 2023 ರಲ್ಲಿ ಕಾಂಗ್ರೆಸ್‌ನ ಬಿ ಆರ್ ಪಾಟೀಲ್ ಗೆದ್ದಿದ್ದರು.
ಚುನಾವಣಾ ಆಯೋಗದ ಒಳಗಿನವರಿಂದಲೇ ಸಹಾಯ :
ದೇಶದಲ್ಲಿ ನಡೆದಿರುವ ಆಪಾದಿತ ಮತ ವಂಚನೆಯನ್ನು ಬಹಿರಂಗಪಡಿಸುವಲ್ಲಿ ಭಾರತೀಯ ಚುನಾವಣಾ ಆಯೋಗಕ್ಕಾಗಿ (ECI) ಕೆಲಸ ಮಾಡುತ್ತಿರುವವರೇ ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ವೋಟ್ ಚೋರಿಯನ್ನು ಬಹಿರಂಗಪಡಿಸುವಲ್ಲಿ ನಾವು ಚುನಾವಣಾ ಆಯೋಗದ ಒಳಗಿನಿಂದ ಸಹಾಯ ಪಡೆಯಲು ಪ್ರಾರಂಭಿಸಿದ್ದೇವೆ. ಇದು ಮೊದಲು ನಡೆಯುತ್ತಿಲ್ಲ. ಈಗ ನಾವು ಆಯೋಗದ ಒಳಗಿನಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ, ಇದು ನಿಲ್ಲುವುದಿಲ್ಲ. ಭಾರತದ ಜನರು ಇದನ್ನು ಸಹಿಸುವುದಿಲ್ಲ. ಮತಗಳನ್ನು ಕದಿಯಲಾಗುತ್ತಿದೆ ಎಂದು ಯುವಕರು ಅರಿತುಕೊಂಡ ನಂತರ, ಅವರ ಶಕ್ತಿ ಹೊರಹೊಮ್ಮುತ್ತದೆ ಎಂದರು.
ಕೇಂದ್ರೀಕೃತ ಸಾಫ್ಟ್‌ವೇರ್ ಬಳಸಿ ಕಾಂಗ್ರೆಸ್ ಬೂತ್‌ಗಳಿಂದ ಮತದಾರರನ್ನು ಅಳಿಸುವ ಪ್ರಯತ್ನ ನಡೆದಿತ್ತು. ಆಳಂದದಲ್ಲಿ ಯಾರೋ ಒಬ್ಬರು 6,018 ಮತಗಳನ್ನು ಅಳಿಸಲು ಪ್ರಯತ್ನಿಸಿದ್ದರು. ಆದರೆ ಬೂತ್ ಮಟ್ಟದ ಅಧಿಕಾರಿ ತನ್ನ ಚಿಕ್ಕಪ್ಪನ ಮತ ಅಳಿಸಲ್ಪಟ್ಟಿರುವುದನ್ನು ಗಮನಿಸಿದರು. ಅಷ್ಟೇ ಅಲ್ಲದೇ ಅವರ ನೆರೆ ಹೊರೆಯವರ ಮತಗಳನ್ನು ಅಳಿಸಿರುವುದು ಗೊತ್ತಾಯಿತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಾವು ಯಾರು ಮತಗಳನ್ನು ಡಿಲೀಟ್ ಮಾಡಲು ಹೇಳಿಲ್ಲ ಎಂದು ತಿಳಿಸಿದರು. ಹಾಗಾದರೆ ಈ ಮತಗಳ್ಳತನ ಮಾಡಿರುವುದು ಯಾರು ಎಂದು ಪ್ರಶ್ನಿಸಿದರು.

