ಮೈಸೂರು : ಮೈಸೂರಿನಲ್ಲಿ ಜನರ ವಿರೋಧದ ನಡುವೆ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ರಾಝ್ಯ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್ಚರಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್. ಮೈಸೂರು ನಗರದೊಳಗೆ ಎರಡು ಫ್ಲೈ ಓವರ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ, ಸಾಯಿಲ್ ಟೆಸ್ಟ್ ಮಾಡ್ತಿದ್ದಾರೆ ಇದಕ್ಕೆ ನಮ್ಮ ವಿರೋಧವಿದೆ. ಜೆ ಎಲ್ ಬಿ ರಸ್ತೆ, ವಿನೋಬ ರಸ್ತೆಗಳು ಪಾರಂಪರಿಕ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು.
ಜನಾಭಿಪ್ರಾಯ ಪಡೆಯದೇ ಈ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಪಿಆರ್ ಕೂಡ ಸಿದ್ದ ಪಡಿಸುತ್ತಿದ್ದಾರೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ಫ್ಲೈ ಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಮುಂಬೈ ಮಾದರಿಯಲ್ಲಿ ಅಂಡರ್ ಗ್ರೌಂಡ್ ನಲ್ಲಿ ಮೆಟ್ರೋ ನಿರ್ಮಾಣ ಮಾಡಲಿ. ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಿ. ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಸ್ಥಳೀಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿ ಮಾಡಲಿ.
ಜನರ ವಿರೋಧದ ನಡುವೆ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ.. ಗ್ರೇಟರ್ ಮೈಸೂರಿನಿಂದ ಒಳಿತಾಗಲಿದೆ. ಆದರೆ ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಬಾರದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ವಿನೋಬ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಲು ಮುಂದಾದರೆ ಮರಗಳ ಹನನ ಆಗಲಿದೆ. ಹಾಗಾಗಿ ಈ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಬಾರದು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು.
ಪಾರಂಪರಿಕ ನಗರಿಯ ಗುರುತು ಉಳಿಸಿಕೊಳ್ಳಬೇಕು. ಸಿಎಂ ಕೂಡ ಗ್ರೇಟರ್ ಮೈಸೂರು ಸಭೆಯಲ್ಲಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಿಎಂ ಅವರ ಸಲಹೆಯಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಂಸದ ಯದುವೀರ್ ತಿಳಿಸಿದರು.

